ಮಣಿಪುರದಲ್ಲಿ ಗುಂಡಿನ ಚಕಮಕಿ: 11 ಶಂಕಿತ ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ | Militants

ವಿಜಯವಾಣಿ - 2024-11-11T191538.803
Published on

ಇಂಫಾಲ್: ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಇಂದು ಭದ್ರತಾ ಪಡೆಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 11 ಶಂಕಿತ ಕುಕಿ ಉಗ್ರರನ್ನು (Militants) ಹೊಡೆದುರುಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಸ್ಸಾಂ ಗಡಿ ಜಿಲ್ಲೆಯಲ್ಲಿ ಶಂಕಿತ ಕುಕಿ ಉಗ್ರರ ಚಟುವಟಿಕೆ ಇರುವ ಮಾಹಿತಿ ಪತ್ತೆಹಚ್ಚಿದ ಭದ್ರತಾ ಪಡೆ, ಉಗ್ರರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದೆ. ಗುಂಡಿನ ಚಕಮಕಿಯಲ್ಲಿ ಒಂದಷ್ಟು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧರಿಗೂ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.

ಶಂಕಿತ ಕುಕಿ ದಂಗೆಕೋರರು ಜಿರಿಬಾಮ್‌ನಲ್ಲಿರುವ ಪೊಲೀಸ್ ಠಾಣೆಯ ಮೇಲೆ ಎರಡು ಕಡೆಯಿಂದ ಭಾರಿ ದಾಳಿ ನಡೆಸಿದ ಬೆನ್ನಲ್ಲೇ ಎನ್‌ಕೌಂಟರ್ ಅಸ್ತ್ರವನ್ನು ಭದ್ರತಾ ಪಡೆ ಬಳಸಿದೆ ಎಂದು ಮೂಲಗಳು ತಿಳಿಸಿವೆ. ಜಿರಿಬಾಮ್‌ನ ಬೊರೊಬೆಕ್ರಾದಲ್ಲಿರುವ ಈ ಪೊಲೀಸ್ ಠಾಣೆಯು ಕಳೆದ ತಿಂಗಳಲ್ಲಿ ಹಲವಾರು ಬಾರಿ ಇಂತಹ ದಾಳಿಗೆ ಗುರಿಯಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ ತಕ್ಷಣವೇ, ಶಂಕಿತ ಕುಕಿ ದಂಗೆಕೋರರು ಪೊಲೀಸ್ ಠಾಣೆಯಿಂದ 1 ಕಿಮೀ ದೂರದಲ್ಲಿರುವ ಜಕುರಾಡೋರ್ ಕರೋಂಗ್‌ನಲ್ಲಿನ ಸಣ್ಣ ವಸಾಹತು ಕಡೆಗೆ ಹರಡಿಕೊಂಡರು. ಕೂಡಲೇ ಅಲ್ಲಿದ್ದ ಮನೆಗಳಿಗೆ ಬೆಂಕಿ ಹಚ್ಚಲು ಪ್ರಾರಂಭಿಸಿದರು. ಈ ವೇಳೆ ಭದ್ರತಾ ಪಡೆಯನ್ನು ಟಾರ್ಗೆಟ್ ಮಾಡಿಕೊಂಡ ಉಗ್ರರು, ಏಕಕಾಲಕ್ಕೆ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ ನಡೆಸಿದೆ ಎಂದು ಸ್ಥಳೀಯ ಸುದ್ದಿವಾಹಿನಿಗಳು ವರದಿ ಮಾಡಿವೆ,(ಏಜೆನ್ಸೀಸ್).

ಘಟನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ....

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net