ಟಿಎಂಸಿ, ಕಾಂಗ್ರೆಸ್​, ಕಮ್ಯುನಿಷ್ಟರ 11 ಶಾಸಕರು ಸೇರಿ 13 ನಾಯಕರು ಬಿಜೆಪಿ ಸೇರ್ಪಡೆ; ಇದಿನ್ನೂ ಶುರು ಎಂದ ಅಮಿತ್​ ಷಾ!

ಬಜಪ
Published on

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ಕಾವು ಹೆಚ್ಚುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ಇಂದು ರಾಜ್ಯಕ್ಕೆ ಭೇಟಿ ನೀಡಿದ್ದು, ಮಮತಾ ಬ್ಯಾನರ್ಜಿ ಅವರ ಸರ್ಕಾರಕ್ಕೆ ಬಿಗ್​ ಶಾಕ್​ ಎದುರಾಗಿದೆ. ಟಿಎಂಸಿ, ಕಾಂಗ್ರೆಸ್​ ಮತ್ತು ಕಮ್ಯುನಿಷ್ಟ್​ ಪಕ್ಷದ 11 ಶಾಸಕರು, ಓರ್ವ ಸಂಸದ ಪಕ್ಷ ತ್ಯಜಿಸಿ, ಬಿಜೆಪಿ ಸೇರಿಕೊಂಡಿದ್ದಾರೆ.

ಟಿಎಂಸಿಯ ಅತ್ಯಂತ ಪ್ರಭಾವಿ ನಾಯಕ ಸುವೇಂದು ಅಧಿಕಾರಿಯನ್ನು ಅಮಿತ್​ ಷಾ ಅವರು ಪಕ್ಷಕ್ಕೆ ಬರ ಮಾಡಿಕೊಂಡರು. ಅವರ ಜತೆ ಶಾಸಕರಾದ ತಪಸಿ ಮೊಂಡಾಲ್​, ಅಶೋಕ್ ದಿಂಡಾ, ಸುದೀಪ್ ಮುಖರ್ಜಿ, ಸೈಕತ್ ಪಂಜ, ಶಿಲ್ಭದ್ರ ದತ್ತ, ದೀಪಾಲಿ ಬಿಸ್ವಾಸ್, ಸುಕ್ರಾ ಮುಂಡಾ, ಶ್ಯಾಮಪ್ಡಾ ಮುಖರ್ಜಿ, ಬಿಸ್ವಾಜಿತ್ ಕುಂದು ಮತ್ತು ಬನಸ್ರಿ ಮೈಟಿ ಬಿಜೆಪಿ ಸೇರಿದ್ದಾರೆ. 11 ಶಾಸಕರ ಜತೆ ಪುರ್ಬಾ ಬುರ್ದ್ವಾನ್‌ನ ಟಿಎಂಸಿ ಸಂಸದ ಸುನಿಲ್ ಮೊಂಡಾಲ್ ಮತ್ತು ಮಾಜಿ ಸಂಸದ ದಸರಥ್ ಟಿರ್ಕಿ ಬಿಜೆಪಿ ಸೇರಿದ್ದಾರೆ.

ನಾಯಕರುಗಳನ್ನು ಬಿಜೆಪಿಗೆ ಬರಮಾಡಿಕೊಂಡು ಮಾತನಾಡಿದ ಅಮಿತ್​ ಷಾ ಅವರು, 'ದೀದೀ, ನೀವು ಬೇರೆಯವರು ಪಕ್ಷಾಂತರ ಆಗುವ ಬಗ್ಗೆ ಮಾತನಾಡುತ್ತೀರಿ, ಆದರೆ ನೀವೂ ಕೂಡ ಕಾಂಗ್ರೆಸ್​ನ್ನು ತ್ಯಜಿಸಿ ಬಂದವರು ಎನ್ನುವುದನ್ನೇ ಮರೆತಿದ್ದೀರಿ. ಇವರಷ್ಟೇ ಅಲ್ಲ, ಬಿಜೆಪಿ ಸೇರಲು ಸಾವಿರಾರು ಜನರು ಕಾಯುತ್ತಿದ್ದಾರೆ. ಇದು ಕೇವಲ ಆರಂಭ ಮಾತ್ರ. ರಾಜ್ಯದಲ್ಲಿ ಉದ್ಯೋಗ ಇಲ್ಲದೆ ಒದ್ದಾಡುತ್ತಿರುವ ಸಾವಿರಾರು ಯುವಕರ ಕಡೆ ಗಮನ ಹರಿಸಲು ನೀವು ಸಿದ್ಧರಿಲ್ಲ. ನೀವು ಕೇವಲ ನಿಮ್ಮ ಅಳಿಯನ ಕಡೆ ಮಾತ್ರ ಗಮನ ಹರಿಸುತ್ತಿದ್ದೀರಿ' ಎಂದು ಹೇಳಿದ್ದಾರೆ.

ಟಿಎಂಸಿ ಮುಂದಿನ ಚುನಾವಣೆಯಲ್ಲಿ ನಂಬರ್​ ಒನ್​ ಆಗಿರುವುದಿಲ್ಲ, ನಂಬರ್​ ಎರಡಕ್ಕೆ ಇಳಿಯುತ್ತದೆ. ಬಿಜೆಪಿ ನಂಬರ್​ ಒನ್​ ಸ್ಥಾನಕ್ಕೆ ಏರಲಿದೆ ಎಂದು ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net