

ಬೆಂಗಳೂರು: ಕರೊನಾ ಸಂಕಷ್ಟ ಹಾಗೂ ಲಾಕ್ಡೌನ್ ಕಾರಣಗಳಿಂದಾಗಿ ವಿದೇಶಗಳು ಹಾಗೂ ವಿವಿಧ ರಾಜ್ಯಗಳಲ್ಲಿ ಸಿಕ್ಕಿಬಿದ್ದಿರುವ ಕನ್ನಡಿಗರನ್ನು ರಾಜ್ಯಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ.
ಕೇಂದ್ರ ಸರ್ಕಾರ ವಿದೇಶಗಳಲ್ಲಿರುವ ಭಾರತೀಯರನ್ನು ವಾಪಸ್ ಕರೆಸಿಕೊಳ್ಳುವ ಸಂಬಂಧ ಪ್ಲಾನ್ ಆಫ್ ಆಕ್ಷನ್ ತಯಾರು ಮಾಡುತ್ತಿದೆ. ಒಟ್ಟಾರೆ ಕರ್ನಾಟಕದ 10823 ಜನರನ್ನು ಕರೆತರಲು ಉದ್ದೇಶಿಸಲಾಗಿದ್ದು, ಈ ಪೈಕಿ 6100 ಕನ್ನಡಿಗರನ್ನು ಮೊದಲ ಹಂತದಲ್ಲಿ ಕರೆತರಲಾಗುತ್ತಿದೆ. ಈಗಾಗಲೇ ಗುಜರಾತ್ನಲ್ಲಿರುವ ಕನ್ನಡಿಗರನ್ನು ಕರೆ ತರಲು ಪ್ರಯತ್ನ ಆರಂಭವಾಗಿದೆ.
ಇನ್ನು ಹೊರಗಿನಿಂದ ಕರೆತರುವವರನ್ನು ಪರೀಕ್ಷೆಗೊಳಪಡಿಸಲಾಗುತ್ತದೆ. ಬಳಿಕ ಎ, ಬಿ ಮತ್ತು ಸಿ ಎಂದು ವರ್ಗೀಕರಿಸಿ ಅವರಿಗೆ ಚಿಕಿತ್ಸೆ ಅಗತ್ಯವಿದ್ದರೆ ನೀಡಲಾಗುತ್ತದೆ ಹಾಗೂ ಕ್ವಾರಂಟೈನ್ ಮಾಡಲಾಗುತ್ತದೆ. ಲಾಕ್ಡೌನ್ನಿಂದಾಗಿ ಬೆಂಗಳೂರು ಸೇರಿ ರಾಜ್ಯದ ಇನ್ನಿತರ ನಗರಗಳಲ್ಲಿ ಸಿಲುಕಿದ್ದ 3 ಸಾವಿರ ವಿದೇಶಿಗರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 22 ವಿಶೇಷ ವಿಮಾನಗಳ ಮೂಲಕ ಅವರವರ ರಾಷ್ಟ್ರಕ್ಕೆ ಕಳುಹಿಸಲಾಗಿದೆ.