ಅಮ್ಮ ಸತ್ತ ನಾಲ್ಕೇ ದಿನಕ್ಕೆ ಮಗನೂ ಇಲ್ಲ ... ಸಾವಿನಲ್ಲೂ ತಾಯಿಯನ್ನು ಹಿಂಬಾಲಿಸಿದ ಇರ್ಫಾನ್

Irfan Khan Mother Final
Published on

ಭಾರತೀಯ ಚಿತ್ರರಂಗ ಕಂಡ ಹೆಮ್ಮೆಯ ನಟ ಇರ್ಫಾನ್ ಖಾನ್ , ಬುಧವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗಿದೆ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಾರೆ.

ದುರಂತವೆಂದರೆ, ಇರ್ಫಾನ್ ಖಾನ್ ಅವರ ತಾಯಿ ಸಯಿದಾ ಬೇಗಮ್ ಕೇವಲ ನಾಲ್ಕು ದಿನಗಳ ಹಿಂದಷ್ಟೇ ನಿಧನರಾಗಿದ್ದರು. ನವಾಬ್ ಕುಟುಂಬದ ಸಯಿದಾ ಬೇಗಮ್ ಅವರಿಗೆ 95 ವರ್ಷ ವಯಸ್ಸಾಗಿತ್ತು. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಜೈಪುರದಲ್ಲಿ ನಿಧನರಾಗಿದ್ದರು. ಆದರೆ, ಈ ಕಡೆ ಇರ್ಫಾನ್ ಸಹ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಕಾರಣ, ತಾಯಿಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಈಗ ತಾಯಿ ನಿಧನರಾದ ನಾಲ್ಕನೇ ದಿನಕ್ಕೆ ಇರ್ಫಾನ್ ಸಹ ಇನ್ನಿಲ್ಲವಾಗಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ನ್ಯೂರೋಎಂಡೋಕ್ರೈಮ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಇರ್ಫಾನ್ , ಇತ್ತೀಚಿನ ವರ್ಷಗಳಲ್ಲಿ ಅಭಿನಯಿಸುವುದನ್ನು ಕಡಿಮೆ ಮಾಡಿದ್ದರು. ಅವರು ಕಡೆಯದಾಗಿ ಅಭಿನಯಿಸಿದ ಚಿತ್ರ ‘ಅಂಗ್ರೇಜಿ ಮೀಡಿಯಂ’ ಕಳೆದ ತಿಂಗಳಷ್ಟೇ ಬಿಡುಗಡೆಯಾಗಿತ್ತು. ಆ ಚಿತ್ರದ ಪ್ರಚಾರ ಕಾರ್ಯಗಳಲ್ಲೂ ಇರ್ಫಾನ್ ಭಾಗಿಯಾಗಿರಲಿಲ್ಲ. ಕ್ಯಾನ್ಸರ್ ವಿರುದ್ಧ ಕೆಲವು ವರ್ಷಗಳ ತೀವ್ರ ಸೆಣೆಸಾಟದ ನಂತರ ಕೊನೆಗೂ ಇರ್ಫಾನ್ ನಿಧನರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net