ವೆಡ್ಡಿಂಗ್​​​​​ ಹಾಲ್​​ನಲ್ಲಿ ಅಗ್ನಿ ಅವಘಡ: 100 ಮಂದಿ ಸಾವು, 150ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ

fire breaks out
Published on

ಬಾಗ್ದಾದ್​​: ವೆಡ್ಡಿಂಗ್​ ಹಾಲ್​ನಲ್ಲಿ ಆವರಿಸಿದ ಬೆಂಕಿಯ ಜ್ವಾಲೆಗೆ ಸುಮಾರು 100 ಮಂದಿ ಮೃತಪಟ್ಟು 150ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಉತ್ತರ ಇರಾಕ್​ನಲ್ಲಿ ನಡೆದಿರುವುದಾಗಿ ಅಲ್ಲಿನ ಅಧಿಕಾರಿಗಳು ಬುಧವಾರ ಮಾಹಿತಿ ನೀಡಿದ್ದಾರೆ.

ಇರಾಕ್​ನ ನೈನ್​ವೇಹ್​ ಪ್ರಾಂತ್ಯದ ಹಮ್ದನಿಯಾ ಪ್ರದೇಶದಲ್ಲಿ ಅಗ್ನಿ ಅವಘಡ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಮ್ದನಿಯಾ ಪ್ರದೇಶವೂ ರಾಜಧಾನಿ ಬಾಗ್ದಾದ್​ನ ವಾಯುವ್ಯ ಭಾಗದಲ್ಲಿ ಸುಮಾರು 335 ಕಿ.ಮೀ ದೂರದಲ್ಲಿರುವ ಮೊಸೂಲ್ ನಗರದ ಹೊರಭಾಗದಲ್ಲಿರುವ​ ಪ್ರಧಾನವಾಗಿ ಕ್ರಿಶ್ಚಿಯನ್ನರೇ ಇರುವ ಪ್ರದೇಶವಾಗಿದೆ.

ಬೆಂಕಿ ಹೊತ್ತಿಕೊಂಡು ಮದುವೆಯ ಸಭಾಂಗಣದ ಒಳಗೆ ಜ್ವಾಲೆಗಳು ಧಗಧಗನೇ ಉರಿಯುತ್ತಿರುವ ದೃಶ್ಯವನ್ನು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬೆಂಕಿಯ ನಂತರದ ದೃಶ್ಯದಲ್ಲಿ ಜನರು ನಡೆದುಕೊಂಡು ಹೋಗುವಾಗ ಸುಟ್ಟ ಲೋಹ ಮತ್ತು ಭಗ್ನಾವಶೇಷಗಳು ಮಾತ್ರ ವಿಡಿಯೋದಲ್ಲಿ ಗೋಚರಿಸುತ್ತವೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸಚಿವಾಲಯದ ವಕ್ತಾರ ಸೈಫ್ ಅಲ್-ಬದರ್ ಅವರು ಸರ್ಕಾರಿ ಇರಾಕಿ ನ್ಯೂಸ್ ಏಜೆನ್ಸಿ ಮೂಲಕ ಅಪಘಾತದ ಅಂಕಿಅಂಶವನ್ನು ನೀಡಿದ್ದಾರೆ. ಈ ದುರಂತ ನಿಜಕ್ಕೂ ದುಃಖಕರ. ಸಂತ್ರಸ್ತರಿಗೆ ಪರಿಹಾರವನ್ನು ಒದಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅಲ್-ಬದರ್​ ತಿಳಿಸಿದರು.

ಪ್ರಧಾನಿ ಮೊಹಮ್ಮದ್ ಶಿಯಾ ಅಲ್-ಸುಡಾನಿ ಅವರು ಬೆಂಕಿಯ ಅವಘಡದ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಅಗತ್ಯ ನೆರವು ಮತ್ತು ಪರಿಹಾರಗಳನ್ನು ಒದಗಿಸುವಂತೆ ಸೂಚನೆ ನೀಡಿದ್ದಾರೆ.

ಬೆಂಕಿ ಹೊತ್ತಿಕೊಳ್ಳಲು ಕಾರಣ ಏನೆಂಬುದರ ಬಗ್ಗೆ ತಕ್ಷಣಕ್ಕೆ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ. ಆದರೆ, ಇರಾಕ್​ ಮಾಧ್ಯಮಗಳ ವರದಿ ಪ್ರಕಾರ ಸ್ಥಳದಲ್ಲಿ ಪಟಾಕಿಗಳು ಸಿಡಿಸಿದ ಪರಿಣಾಮ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಮದುವೆ ಸಭಾಂಗಣದ ಹೊರಭಾಗವು ದೇಶದಲ್ಲಿ ಕಾನೂನುಬಾಹಿರವಾದ ಹೆಚ್ಚು ಸುಡುವ ಹೊದಿಕೆಯಿಂದ ಅಲಂಕರಿಸಲ್ಪಟ್ಟಿದೆ ಎಂದು ನಾಗರಿಕ ರಕ್ಷಣಾ ಅಧಿಕಾರಿಗಳು ನೀಡಿರುವ ಹೇಳಿಕೆಯನ್ನು ಇರಾಕ್ ಮಾಧ್ಯಮಗಳು ಉಲ್ಲೇಖಿಸಿವೆ. ​

ಹೆಚ್ಚು ಸುಡುವ ಮತ್ತು ಕಡಿಮೆ ವೆಚ್ಚದ ಕಟ್ಟಡ ಸಾಮಗ್ರಿಗಳನ್ನು ಬಳಸಿದ ಪರಿಣಾಮವಾಗಿ ಬೆಂಕಿಯು ಸಭಾಂಗಣವನ್ನು ಆವರಿಸಿ, ಹಾಲ್‌ನ ಕುಸಿತಕ್ಕೆ ಕಾರಣವಾಯಿತು. ಬೆಂಕಿ ಹೊತ್ತಿಕೊಂಡ ಕೆಲವೇ ನಿಮಿಷಗಳಲ್ಲಿ ಹಾಲ್​​ ಕುಸಿಯಿತು ಎಂದು ನಾಗರಿಕ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ಪಡೆಗಳು ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net