ಪ್ರತಿ ವರ್ಷ ಜಗತ್ತಿನಲ್ಲಿ 100 ಕೋಟಿ ಟನ್ ಆಹಾರ ವ್ಯರ್ಥ!

879
Published on

ನವದೆಹಲಿ: ಜಗತ್ತಿನಾದ್ಯಂತ ಪ್ರತಿ ವರ್ಷ ಸುಮಾರು 100 ಕೋಟಿ ಮೆಟ್ರಿಕ್ ಟನ್ ಆಹಾರ ಪದಾರ್ಥ ವ್ಯರ್ಥವಾಗುತ್ತಿದೆ. ಜಾಗತಿಕವಾಗಿ ಉತ್ಪಾದನೆಯಾಗುವ ಆಹಾರದಲ್ಲಿ ಸುಮಾರು ಮೂರನೇ ಒಂದರಷ್ಟು ನಷ್ಟ ವಾಗುತ್ತಿದೆ ಅಥವಾ ವ್ಯರ್ಥವಾಗುತ್ತಿದೆ ಎಂಬುದನ್ನು ವರದಿಯೊಂದು ಬೆಳಕಿಗೆ ತಂದಿದೆ. ಆಹಾರದ ಕೊರತೆ ಜಾಗತಿಕ ಹಸಿವಿಗೆ ಕಾರಣವಲ್ಲ; ಜಗತ್ತಿನ ಪ್ರತಿಯೊಬ್ಬರಿಗೂ ಉಣಬಡಿಸುವಷ್ಟು ಆಹಾರ ಉತ್ಪಾದನೆಯಾಗುತ್ತದೆ. ಆದರೆ, ವ್ಯರ್ಥವಾಗುವಿಕೆ ಹಾಗೂ ದುರ್ಬಲ ನಿರ್ವಹಣೆ ಯಿಂದಾಗಿ ಅಂತರ ಉಂಟಾಗುತ್ತಿದೆ. ಹೀಗಾಗಿ ಜಾಗತಿಕ ಹಸಿವು ಮತ್ತು ಜಾಗತಿಕ ಆಹಾರ ವ್ಯರ್ಥಗೊಳ್ಳುವಿಕೆ ಸಮರ್ಥವಾಗಿ ನಿರ್ವಹಿಸ ಬೇಕಾದ 2 ಪ್ರಮುಖ ಜಾಗತಿಕ ವಿಚಾರಗಳಾಗಿವೆ ಎಂದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (ಯುಎನ್​ಇಪಿ) 2021ರ ವರದಿ ತಿಳಿಸಿದೆ.

ಯಾವುದು ಎಷ್ಟು ನಷ್ಟ?: ಆಹಾರ ಧಾನ್ಯಗಳ ಕೊಯ್ಲು ನಡೆದು ಬಿಡಿಯಾಗಿ (ರೀಟೇಲ್) ಜನರನ್ನು ಸೇರುವ ನಡುವೆ ಶೇ.14ರಷ್ಟು ನಷ್ಟವಾಗುತ್ತದೆ. ರೀಟೇಲ್​ನಿಂದ ಬಳಕೆ ನಡುವೆ ಸುಮಾರು ಶೇಕಡ 17ರಷ್ಟು ನಷ್ಟವಾಗುತ್ತದೆ. ಅದೇ ಹೊತ್ತಿಗೆ 81.1 ಕೋಟಿ ಜನರು ಆಹಾರವಿಲ್ಲದೆ ಖಾಲಿ ಹೊಟ್ಟೆಯಲ್ಲಿರುತ್ತಾರೆ. ಆಹಾರ ವ್ಯರ್ಥವಾಗುವ ಪ್ರಮಾಣವನ್ನು 2030ರೊಳಗೆ ಅರ್ಧಕ್ಕೆ ಇಳಿಸಲು ಅನೇಕ ದೇಶಗಳು 2015ರಲ್ಲಿ ಪಣ ತೊಟ್ಟಿದ್ದವು.

ಎಲ್ಲರೂ ಅಪರಾಧಿಗಳೇ!

ಊಟದ ತಟ್ಟೆಯಲ್ಲಿ ಆಹಾರ ಬಿಡುವ ವಿಚಾರದಲ್ಲಿ ಬಹುತೇಕರು ಅಪರಾಧಿಗಳೇ ಆಗಿದ್ದಾರೆ ಎಂದು ವರದಿ ಹೇಳಿದೆ.

ಆಹಾರ ಕೊರತೆಗೆ ಕೊಡುಗೆ...

ಯುಎನ್​ಇಪಿ ವರದಿ ಪ್ರಕಾರ, ಅಗಾಧ ಪ್ರಮಾಣದ ಆಹಾರ ವ್ಯರ್ಥ ಕಡೆಗಣಿಸಲಾಗದ ಸಮಸ್ಯೆಯಾಗುತ್ತಿದೆ. ವಾತಾವರಣ ಬದಲಾವಣೆ, ಪ್ರಕೃತಿ ಮತ್ತು ಜೀವವೈವಿಧ್ಯ ನಷ್ಟ, ಮಾಲಿನ್ಯ ಹಾಗೂ ತ್ಯಾಜ್ಯವನ್ನು ನಿರ್ವಹಿಸುವಲ್ಲಿ ಆಹಾರ ವ್ಯವಸ್ಥೆಯ ಸುಧಾರಣೆ ನಿರ್ಣಾಯಕವಾಗಿದೆ. ಜಗತ್ತಿನಲ್ಲಿ ಕೋಟ್ಯಂತರ ಜನರು ದಿನ ನಿತ್ಯ ಒಂದು ತುತ್ತಿಗೂ ಪರದಾಡುತ್ತಿರುವ ಸನ್ನಿವೇಶದಲ್ಲಿ ಆಹಾರವನ್ನು ನಷ್ಟ ಅಥವಾ ವ್ಯರ್ಥಗೊಳಿಸುವುದು ಆಹಾರ ಕೊರತೆಗೆ ದೊಡ್ಡ ರೀತಿಯಲ್ಲಿ ಕೊಡುಗೆ ನೀಡುತ್ತದೆ ಮಾತ್ರವಲ್ಲದೆ ಅದು ಪರಿಸರಕ್ಕೆ ಮಾರಕವಾದ ಹಸಿರು ಮನೆ ಅನಿಲ (ಜಿಎಚ್​ಜಿ) ಉತ್ಪಾದನೆಗೂ ಕಾರಣವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net