ಒಟಿಟಿಗೆ ಲಗ್ಗೆಯಿಟ್ಟ ‘ಘೋಸ್ಟ್’; ಲಿಮ್ಕಾ ಬುಕ್​​ ಆಫ್​ ರೆಕಾರ್ಡ್ಸ್​​ಗೆ 10 ಸಾವಿರ ಚದರ ಅಡಿಯ ಪೋಸ್ಟರ್!

Untitled design (87)
Published on

ಬೆಂಗಳೂರು: ಸ್ಯಾಂಡಲ್​ವುಡ್​ನ ಹಿರಿಯ ನಟ ಶಿವರಾಜ್​ಕುಮಾರ್​ ಅಭಿನಯದ 'ಘೋಸ್ಟ್'​ ಸಿನಿಮಾ ಇದೀಗ ಜೀ5 ಒಟಿಟಿ ಪ್ಲಾಟ್​ಫಾರ್ಮ್​ಗೆ ಲಗ್ಗೆಯಿಟ್ಟಿದ್ದು, ಇತ್ತೀಚೆಗಷ್ಟೇ ಚಿತ್ರದ 10,000 ಚದರ ಅಡಿಯ ಪೋಸ್ಟರ್ ಅನಾವರಣಗೊಂಡಿತು. ಇದು ಲಿಮ್ಕಾ ಬುಕ್​​ ಆಫ್​ ರೆಕಾರ್ಡ್ಸ್​ಗೆ ಸೇರಲಿದೆ ಎಂದು ಚಿತ್ರದ ನಿರ್ದೇಶಕ ಎಂ.ಜಿ. ಶ್ರೀನಿವಾಸ್​ ತಿಳಿಸಿದ್ದಾರೆ.

ಸಾಹಸ-ಥ್ರಿಲ್ಲರ್‌ ಜಾನರ್​ ಒಳಗೊಂಡ 'ಘೋಸ್ಟ್‌' ಸಿನಿಮಾ ಇದೇ ನವೆಂಬರ್‌ 17 ರಂದು ಜೀ5ನಲ್ಲಿ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಶಿವರಾಜ್​ಕುಮಾರ್​ ನಟನೆಯ ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡದೆ ಇರುವವರು ಇದೀಗ ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ.

ಚಿತ್ರದ ಉತ್ತಮ ಪ್ರಚಾರ ಕಾರ್ಯಕ್ಕಾಗಿ ಬರೋಬ್ಬರಿ ಹತ್ತು ಸಾವಿರ ಚದರ ಅಡಿಯ ‘ಘೋಸ್ಟ್’ ಪೋಸ್ಟರ್​​ನ ಜೀ5 ಹಾಗೂ ಚಿತ್ರತಂಡ ಬಿಡುಗಡೆಗೊಳಿಸಿದೆ. ಜಯನಗರದ ಎಂಇಎಸ್ ಗ್ರೌಂಡ್​ನಲ್ಲಿ ಚಿತ್ರದ 10,000 ಅಡಿ ಪೋಸ್ಟರ್ ಅನಾವರಣಗೊಳಿಸಲಾಗಿದೆ. ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗೆ ಬ್ಯಾನರ್, ಪೋಸ್ಟರ್ ಹಾಕೋದು ಸಹಜ. ಆದರೆ, ಇದೇ ಮೊದಲ ಬಾರಿಗೆ ಒಟಿಟಿ ರಿಲೀಸ್‌ಗೆ ಪೋಸ್ಟರ್ ಹಾಕಿ ವಿಭಿನ್ನವಾಗಿ ಪ್ರಚಾರ ಮಾಡಲಾಗಿದೆ.

'ಘೋಸ್ಟ್'​ ಚಿತ್ರದಲ್ಲಿ ಶಿವರಾಜ್​ಕುಮಾರ್​, ಶ್ರೀನಿವಾಸ್​, ಅರ್ಚನಾ ಜೋಯಿಸ್​, ಜಯರಾಮ್​, ಅನುಪಮ್​ ಖೇರ್​, ಪ್ರಶಾಂತ್​ ನಾರಾಯಣ್​, ಸತ್ಯ ಪ್ರಕಾಶ್​ ಮುಂತಾದವರ ತಾರಾಗಣವಿದೆ. ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net