10 ಕೋಟಿಯಲ್ಲ 10 ರೂ. ಸಾಕು! ತಲೆ ಕಡಿಯಲು ಇನಾಮು ಘೋಷಣೆ, ಆಚಾರ್ಯರಿಗೆ ಉದಯನಿಧಿ ತಿರುಗೇಟು

udhayanidhi stalin behead
Published on

ಚೆನ್ನೈ: ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ತಮಿಳುನಾಡು ಸಿಎಂ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್​ ಅವರ ತಲೆಗೆ 10 ಕೋಟಿ ರೂ. ಇನಾಮು ಘೋಷಣೆ ಮಾಡಿರುವ ಅಯೋಧ್ಯೆಯ ಪರಮಹಂಸ ಆಚಾರ್ಯರಿಗೆ ಉದಯನಿಧಿ ಅವರು ತಿರುಗೇಟು ನೀಡಿದ್ದಾರೆ. ತಮಿಳುನಾಡಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಕರುಣಾನಿಧಿ ಅವರ ಮೊಮ್ಮಗ ನಾನು, ಇಂಥಾ ಬೆದರಿಕೆಗಳಿಗೆ ಹೆದರುವ ಮಾತೇ ಇಲ್ಲ ಎಂದಿದ್ದಾರೆ.

ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉದಯನಿಧಿ, ನಾನು ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕೆ ಉತ್ತರ ಪ್ರದೇಶದ ಪರಮಹಂಸ ಆಚಾರ್ಯರು ನನ್ನ ತಲೆಯನ್ನು ಕಡಿದವರಿಗೆ 10 ಕೋಟಿ ರೂ. ಬಹುಮಾನ ಕೊಡುವುದಾಗಿ ಹೇಳಿದ್ದಾರೆ. ನನ್ನ ತಲೆಗೆ 10 ರೂ. ಬಾಚಣಿಗೆ ಸಾಕು ಎನ್ನುವ ಮೂಲಕ ಜೀವ ಬೆದರಿಕೆಯ ಬಗ್ಗೆ ಹಗುರವಾಗಿ ಮಾತನಾಡಿದ ಉದಯನಿಧಿ, ಚಾಪ್​ ಅಥವಾ ಸ್ಲೈಸ್​ ಎಂಬ ಪದವು ತಮಿಳಿನಲ್ಲಿ ಕೂದಲು ಬಾಚುವುದು ಎಂಬರ್ಥವನ್ನು ಸೂಚಿಸುತ್ತದೆ ಎಂದರು.

ಇದೆಲ್ಲ ನಮಗೆ ಹೊಸದೇನಲ್ಲ. ಇಂತಹ ಬೆದರಿಕೆಗಳಿಗೆ ನಾನು ಹೆದರುವವನೂ ಅಲ್ಲ. ತಮಿಳುನಾಡಿಗಾಗಿ ತಮ್ಮ ತಲೆಯನ್ನೇ ರೈಲು ಹಳಿಯ ಮೇಲೆ ಇಟ್ಟಂತಹ ವ್ಯಕ್ತಿಯ ಮೊಮ್ಮಗ ನಾನು ಎಂದು ತನ್ನ ತಾತ ಕರುಣಾನಿಧಿಯನ್ನು ನೆನಪಿಸಿ ತಿರುಗೇಟು ನೀಡಿದರು.

ಕರುಣಾನಿಧಿಗೆ ತಿರುವು ಕೊಟ್ಟ ಘಟನೆ 

ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ ಅವರು ಪೆರಿಯಾರ್ ಆರಂಭಿಸಿದ ವಿಚಾರವಾದಿ ಮತ್ತು ಬ್ರಾಹ್ಮಣ ವಿರೋಧಿ ದ್ರಾವಿಡ ಚಳವಳಿಯ ನೇತೃತ್ವ ವಹಿಸಿದ್ದರು. ಸ್ಟಾಲಿನ್ ಉಲ್ಲೇಖಿಸಿದ ಘಟನೆಯು 1953ರಲ್ಲಿ ನಡೆಯಿತು ಮತ್ತು ತಮಿಳು ರಾಜಕೀಯದಲ್ಲಿ ಕರುಣಾನಿಧಿಯ ಉದಯಕ್ಕೆ ಈ ಘಟನೆ ಪ್ರಮುಖ ತಿರುವಾಯಿತು. ಸಿಮೆಂಟ್ ಕಾರ್ಖಾನೆ ನಿರ್ಮಾಣವಾಗುತ್ತಿದ್ದ ಗ್ರಾಮಕ್ಕೆ ಕೈಗಾರಿಕೋದ್ಯಮಿ ದಾಲ್ಮಿಯಾಸ್ ಕುಟುಂಬದ ಹೆಸರನ್ನು ಮರುನಾಮಕರಣ ಮಾಡುವುದನ್ನು ವಿರೋಧಿಸಿ, ಕರುಣಾನಿಧಿ ನೇತೃತ್ವದಲ್ಲಿ ಡಿಎಂಕೆ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದರು. ಈ ವೇಳೆ ಹಳಿಗಳ ಮೇಲೆ ಮಲಗಿ ಪ್ರತಿಭಟಿಸಿದ್ದರು.

ಆಚಾರ್ಯರು ಹೇಳಿದ್ದೇನು?

ಉದಯನಿಧಿ ಸ್ಟಾಲಿನ್ ತಲೆಯನ್ನು ಕಡಿದು ತಂದವರಿಗೆ 10 ಕೋಟಿ ರೂಪಾಯಿ ಕೊಡುತ್ತೇನೆ. ಆತನನ್ನು ಕೊಲ್ಲವು ಯಾರಿಗೂ ಇಲ್ಲದಿದ್ದರೆ, ನಾನೇ ಆತನನ್ನು ಹುಡುಕಿ ಕೊಲ್ಲುತ್ತೇನೆ ಎಂದು ​ಅಯೋಧ್ಯೆಯ ತಪಸ್ವಿ ಚಾವ್ನಿ ದೇವಸ್ಥಾನದ ಪ್ರಧಾನ ಅರ್ಚಕ ಪರಮಹಂಸ ಆಚಾರ್ಯರು ನಿನ್ನೆ (ಸೆ.04) ಹೇಳಿದ್ದಾರೆ. ಅಲ್ಲದೆ, ಸನಾತನ ಧರ್ಮಕ್ಕೆ ಲಕ್ಷಾಂತರ ವರ್ಷಗಳ ಇತಿಹಾಸವಿದ್ದು, ತನ್ನದೇ ಆದ ಅಸ್ತಿತ್ವವನ್ನು ಹೊಂದಿದೆ. ಭೂಮಿಯ ಮೇಲೆ ಯಾವುದಾದರು ಒಂದು ಧರ್ಮವಿದ್ದರೆ ಅದು ಸನಾತನ ಧರ್ಮ. ಇದಕ್ಕೆ ಯಾವುದೇ ಆದಿ ಹಾಗೂ ಅಂತ್ಯವಿಲ್ಲ. ಸನಾತನ ಧರ್ಮವನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಅವರೇ ನಾಶವಾಗಿ ಬಿಡುತ್ತಾರೆ ಎಂದಿದ್ದಾರೆ.

ಏನಿದು ವಿವಾದ?

ಶನಿವಾರ ಚೆನ್ನೈನಲ್ಲಿ ನಡೆದ ಸನಾತನ ನಿರ್ಮೂಲನ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಉದಯನಿಧಿ ಸ್ಟಾಲಿನ್​, ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಕೆಲವೊಂದು ವಿಚಾರಗಳನ್ನು ಕೇವಲ ವಿರೋಧಿಸಿದರೆ ಸಾಲದು, ಅವುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ನಾವು ಡೆಂಘೆ, ಮಲೇರಿಯಾ ಅಥವಾ ಕರೊನಾವನ್ನು ಎದುರಿಸಬಾರದು ಅವುಗಳನ್ನು ಶಾಶ್ವತವಾಗಿ ತೊಡೆದುಹಾಕಬೇಕು. ಅದರಂತೆ ಸನಾತನವನ್ನು ನಿರ್ಮೂಲನೆ ಮಾಡಬೇಕು ಎಂದು ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದರು.

ಈ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ ಮತ್ತು ಬಿಜೆಪಿ ಹಾಗೂ ಹಿಂದು ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಕೇಂದ್ರ ಗೃಹ ಸಚಿವ ಅಮಿತ್​ ಷಾ ಸೇರಿಂದತೆ ರಾಷ್ಟ್ರ ಮತ್ತು ರಾಜ್ಯ ಬಿಜೆಪಿ ನಾಯಕರು ಹಾಗೂ ಹಿಂದು ಪರ ಸಂಘಟನೆಗಳು ಉದಯನಿಧಿ ಸ್ಟಾಲಿನ್​ ಹೇಳಿಕೆಯನ್ನು ಖಂಡಿಸಿವೆ. ಆದರೆ, ಉದಯನಿಧಿ ಸ್ಟಾಲಿನ್​ ಮಾತ್ರ ನನ್ನ ಹೇಳಿಕೆಗೆ ನಾನು ಬದ್ಧವಾಗಿದ್ದೇನೆ. ಯಾವುದೇ ಕಾರಣಕ್ಕೂ ಹೇಳಿಕೆಯಿಂದ ಹಿಂದೆ ಸರಿಯುವುದಿಲ್ಲ. ಯಾವುದೇ ಕಾನೂನು ಹೋರಾಟಕ್ಕೆ ಸಿದ್ಧನಿದ್ದೇನೆ. ಇಂತಹ ಸಾಮಾನ್ಯ ಕೇಸರಿ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ಪೆರಿಯಾರ್, ಅಣ್ಣಾ ಮತ್ತು ಕಲೈಂಜರ್ ಅವರ ಅನುಯಾಯಿಗಳಾದ ನಾವು, ನಮ್ಮ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಮತ್ತು ಸಮಾನತೆಯ ಸಮಾಜವನ್ನು ಸ್ಥಾಪಿಸಲು ಶಾಶ್ವತವಾಗಿ ಹೋರಾಡುತ್ತೇವೆ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net