More

    ಐದೂವರೆ ತಾಸು ಅಡಚಣೆರಹಿತ ವಿದ್ಯುತ್ ಪೂರೈಕೆ  -ರೈತರಿಗೆ ಮಾತು ಕೊಟ್ಟ ಬೆಸ್ಕಾಂ ಅಧಿಕಾರಿಗಳು -ಕಾರಿಗನೂರಲ್ಲಿ ತೇಜಸ್ವಿ ಪಟೇಲ್ ನೇತೃತ್ವದಲ್ಲಿ ಸಭೆ 

    ದಾವಣಗೆರೆ: ರೈತರ ಒತ್ತಡಕ್ಕೆ ಮಣಿದು ಕೃಷಿ ಚಟುವಟಿಕೆಗೆ ಪ್ರತಿನಿತ್ಯ ಕನಿಷ್ಠ ಐದೂವರೆ ತಾಸು ಅಡಚಣೆರಹಿತ ವಿದ್ಯುತ್ ಪೂರೈಸಲು ಬೆಸ್ಕಾಂ ಅಧಿಕಾರಿಗಳು ಸಮ್ಮತಿಸಿದ್ದಾರೆ.
    ಚನ್ನಗಿರಿ ತಾಲೂಕು ಕಾರಿಗನೂರು ಗ್ರಾಮದ ಉಡುಸಲಾಂಬಿಕಾ ದೇವಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ‘ನಾಟಿಗೆ ವಿದ್ಯುತ್ ನೀಡಿದ ನೀವು ಬೆಳೆಗಳ ಬೆಳವಣಿಗೆ ಹಂತದಲ್ಲಿ ವ್ಯತ್ಯಯ ಮಾಡಿದರೆ ಸಹಿಸುವುದಿಲ್ಲ’ ಎಂದು ರೈತರು ಆಕ್ರೋಶ ಹೊರಹಾಕಿದಾಗ ಅಧಿಕಾರಿಗಳು ಈ ಭರವಸೆ ನೀಡಿದರು.
    ರೈತ ಮುಖಂಡ ತೇಜಸ್ವಿ ಪಟೇಲ್ ನೇತೃತ್ವದಲ್ಲಿ ರೈತರು ದಾವಣಗೆರೆಯಲ್ಲಿ ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಿದ್ದರು. ಧರಣಿ ಮಾಡದಂತೆ ಮನವಿ ಮಾಡಿದ್ದ ಬೆಸ್ಕಾಂ ವ್ಯವಸ್ಥಾಪಕ ಮಹಾಂತೇಶ ಬೀಳಗಿ, ಕಾರಿಗನೂರಿಗೇ ಅಧಿಕಾರಿಗಳನ್ನು ಕಳುಹಿಸಿಕೊಡುವುದಾಗಿ ಹೇಳಿದ್ದರು.
    ಅದರಂತೆ ಸೋಮವಾರ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಬಿ.ಎಸ್. ಜಗದೀಶ್, ಕೆಪಿಟಿಸಿಎಲ್ ಅಧೀಕ್ಷಕ ಇಂಜಿನಿಯರ್ ಜಿ.ಎಂ. ರೇವಣಸಿದ್ದಪ್ಪ ಅವರೊಂದಿಗೆ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ರೈತರ ಅಹವಾಲು ಸ್ವೀಕರಿಸಿತು.
    ತೇಜಸ್ವಿ ಪಟೇಲ್ ಮಾತನಾಡಿ ಮಳೆ ಅಭಾವ ದಿಢೀರ್ ಆದ ಪ್ರಕ್ರಿಯೆಯಲ್ಲ. ಈ ಬಗ್ಗೆ ಸರ್ಕಾರ, ಬೆಸ್ಕಾಂ ಮುಂಜಾಗ್ರತಾ ಕ್ರಮ ವಹಿಸಬೇಕಿತ್ತು. ಕಾರಿಗನೂರು ಭಾಗದಲ್ಲಿ 20 ಸಾವಿರ ಎಕರೆಯಷ್ಟು ಭತ್ತ ನಾಟಿಯಾಗಿದೆ. 12 ಸಾವಿರ ಎಕರೆಯಷ್ಟು ಅಡಕೆ ಪ್ರದೇಶವಿದೆ. ಇಂತಹ ಸಂದರ್ಭದಲ್ಲಿ ಸಮರ್ಪಕ ವಿದ್ಯುತ್ ನೀಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
    ರೈತರ ವಿಚಾರದಲ್ಲಿ ಬೆಸ್ಕಾಂ ಅಥವಾ ಭದ್ರಾ ನೀರಾವರಿ ಸಲಹಾ ಸಮಿತಿಯಾಗಲೀ ದಿಢೀರ್ ನಿರ್ಧಾರ ಕೈಗೊಳ್ಳುವುದು ಥರವಲ್ಲ. ನಮ್ಮ ಬೇಡಿಕೆಯಂತೆ ಕನಿಷ್ಠ 6 ತಾಸು ಯಾವ ಅಡೆತಡೆಯಿಲ್ಲದೆ ವಿದ್ಯುತ್ ವಿತರಿಸಲೇಬೇಕು ಎಂದು ಆಗ್ರಹಿಸಿದರು.
    ಈ ಸಂಬಂಧ ಎಂಡಿ ಮಹಾಂತೇಶ ಬೀಳಗಿ ಅವರಿಗೆ ಕರೆ ಮಾಡಿದರು. ರಾಜ್ಯದಲ್ಲಿ ಸ್ವಲ್ಪ ಮಟ್ಟಿಗೆ ಮಳೆ ಸುಧಾರಿಸಿದೆ. ಹೀಗಾಗಿ ರೈತರು ಆತಂಕ ಪಡಬೇಕಿಲ್ಲ. ಸಮರ್ಪಕ ವಿದ್ಯುತ್ ಪೂರೈಸಲಾಗುವುದು ಎಂದು ಅಭಯ ನೀಡಿದರು.
    ಅಲ್ಲಿದ್ದ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ‘ನಾವು ಆರು ತಾಸು ವಿದ್ಯುತ್ ನೀಡಲು ಪ್ರಯತ್ನಿಸುತ್ತೇವೆ. ಆದರೆ ಕೆಲವೊಮ್ಮೆ ವ್ಯತ್ಯಾಸವಾದರೂ ಕನಿಷ್ಠ ಐದೂವರೆ ತಾಸು ಕರೆಂಟ್ ಕೊಡುವುದು ನಿಶ್ಚಿತ’ ಎಂದು ಭರವಸೆ ನೀಡಿದರು.
    ಹೊಲಗಳಲ್ಲಿ ಕೆಲವೆಡೆ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದು ಕಂಬಗಳ ಅಂತರ ಕಡಿಮೆ ಮಾಡಬೇಕು. ವಾಲಿರುವ ಕಂಬಗಳನ್ನು ಬದಲಿಸಬೇಕು. ಇನ್ಸುಲೇಟರ್‌ಗಳು ಒಡೆದು ಹೋಗಿದ್ದು ಅವನ್ನು ಸರಿಪಡಿಸಿಕೊಡಬೇಕು ಎಂದಾಗ ಅಧಿಕಾರಿಗಳು ಅಸ್ತು ಎಂದರು.
    ವಿದ್ಯುತ್ ವಿತರಣಾ ಕೇಂದ್ರಕ್ಕೆ ಆಗ್ರಹ
    ಕಾರಿಗನೂರಲ್ಲಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಬೇಕು. ಈ ಸಂಬಂಧ 6 ತಿಂಗಳಿಂದಲೂ ಪ್ರಸ್ತಾವ ಸಲ್ಲಿಕೆಯಾಗಿದೆ. ಈಗಿರುವ ತ್ಯಾವಣಗಿ ವಿದ್ಯುತ್ ಕೇಂದ್ರ ಒಂದನ್ನೇ ರೈತರು ಅವಲಂಭಿಸಿರುವುದರಿಂದ ಬೇಡಿಕೆ ಪೂರೈಸಲು ಸಾಧ್ಯವಿಲ್ಲ. ಇಲ್ಲಿಯೇ ಕೇಂದ್ರವಾದಲ್ಲಿ ಗುಣಮಟ್ಟದ ವಿದ್ಯುತ್ ಹಾಗೂ ಸಮರ್ಪಕ ಬೇಡಿಕೆ ಈಡೇರಿದಂತಾಗಲಿದೆ ಎಂದು ತೇಜಸ್ವಿ ಪಟೇಲ್ ಹೇಳಿದಾಗ ಈ ಬಗ್ಗೆ ಪ್ರಯತ್ನ ನಡೆಸುವುದಾಗಿ ಅಧಿಕಾರಿಗಳು ಒಪ್ಪಿದರು.
    ಸಭೆಯಲ್ಲಿ ಗ್ರಾಪಂ ಸದಸ್ಯರಾದ ಬಸವೇಶ ಪಟೇಲ್, ಶರತ್, ಕಿರಣ್, ಪ್ರವೀಣ್, ಕೊಂಪೇರು ಬಸವರಾಜಪ್ಪ, ಜಿ.ಸಿ.ಮಂಜುನಾಥ, ಜಿಟಿ ಗಂಗಾಧರನಾಯ್ಕ, ಬೆಂಡೆಕಾಯಿ ನಿರಂಜನಮೂರ್ತಿ, ನಾಗರಾಜನಾಯ್ಕ, ಕದರನಹಳ್ಳಿ ಮುರುಗೇಶಪ್ಪ, ಬೆಂಗಳೂರು ರಾಜು, ಅರೆಹಳ್ಳಿ ಮಹೇಶ್, ದ್ಯಾಮಣ್ಣ ಹಾಗೂ ಬೆಸ್ಕಾಂ ಇಇ ಎಸ್.ಕೆ. ಪಾಟೀಲ್, ಎಇಇ ಟಿ.ನಾಗರಾಜಪ್ಪ ಕೆಪಿಟಿಸಿಎಲ್ ಇಇ ಷಣ್ಮುಖಪ್ಪ, ಸಿಪಿಐ ಎಚ್.ಕೆ.ವೀಣಾ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts