ಟ್ರಾಫಿಕ್ ಫೈನ್ ಡಿಸ್ಕೌಂಟ್‌ಗೆ ಹತ್ತೇ ದಿನ ಬಾಕಿ

Traffic Fine
Published on

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ.50 ರಿಯಾಯಿತಿ ಸೆ.9ರವರೆಗೆ ಮಾತ್ರ ಅವಕಾಶ ಇದ್ದು, ಸೌಲಭ್ಯ ಬಳಸಿಕೊಳ್ಳುವಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಿ ಸಲಹೆ ನೀಡಿದೆ.

ಫೆಬ್ರವರಿ.11ರ ಒಳಗೆ ವಿಧಿಸಿರುವ ಟ್ರಾಫಿಕ್ ಫೈನ್ ಮೇಲೆ ಶೇ.50 ರಿಯಾಯಿತಿ ನೀಡಿ ಜುಲೈ 4ರಿಂದ ಸೆ.9 ವರೆಗೆ ಪಾವತಿಗೆ ಸಾರಿಗೆ ಇಲಾಖೆ ಸೂಚಿಸಿದೆ. ಇನ್ನೂ ಕೇವಲ 10 ದಿನಗಳು ಮಾತ್ರ ಉಳಿದಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಪ್ರಾಧಿಕಾರಿ ತಿಳಿಸಿದೆ.

ಈ ಮೊದಲು ಎರಡು ಬಾರಿ ಡಿಸ್ಕೌಂಟ್ ಕೊಟ್ಟಾಗ ವಾಹನ ಮಾಲೀಕರು, ಸ್ವಯಂ ಪ್ರೇರಿತವಾಗಿ ಸಂಚಾರ ಪೊಲೀಸರ ಬಳಿ ಮತ್ತು ಆನ್‌ಲೈನ್‌ನಲ್ಲಿ ದಂಡ ಪಾವತಿ ಮಾಡಿದ್ದರು. ನೂರಾರು ಕೋಟಿ ರೂ. ಸಂಗ್ರಹವಾಗಿತ್ತು. 3ನೇ ಬಾರಿ ಅವಕಾಶ ಕೊಟ್ಟಾಗ ಜನರಿಂದ ಸ್ಪಂಧನೆ ಲಭಿಸಿಲ್ಲ. ಫೆಬ್ರವರಿ.11ರ ಒಳಗೆ ವಿಧಿಸಿರುವ ದಂಡದ ಮೇಲೆ ಡಿಸ್ಕೌಂಟ್ ಕೊಟ್ಟಿರುವುದರಿಂದ ಬಹುತೇಕರು 2ನೇ ಬಾರಿ ಅವಕಾಶ ಕೊಟ್ಟಾಗಲೇ ಪಾವತಿ ಮಾಡಿದ್ದರು. ಅದಕ್ಕಾಗಿ 3ನೇ ಬಾರಿ ರಿಯಾಯಿತಿ ನೀಡಿದಾಗ ಸ್ಪಂಧನೆ ಲಭಿಸಿಲ್ಲ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ವಂಚಕರು ಇದ್ದಾರೇ ಹುಷಾರ್..!

ಆನ್‌ಲೈನ್‌ನಲ್ಲಿ ಟ್ರಾಫಿಕ್ ಫೈನ್ ಸ್ವೀಕರಿಸುವ ಸೋಗಿನಲ್ಲಿ ವಾಹನ ಸವಾರ, ಚಾಲಕರಿಗೆ ವಂಚನೆ ಮಾಡಲು ಸೈಬರ್ ಕ್ರೈಂ ಖದೀಮರು ಬಲೆಬೀಸಿದ್ದಾರೆ.ಇದರಿಂದ ಎಚ್ಚರದಿಂದ ಇರುವಂತೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ಸಂಚಾರ ದಂಡ ವಸೂಲಿ ಮಾಡುತ್ತಿರುವುದಾಗಿ ಸಾರ್ವಜನಿಕರ ಮೊಬೈಲ್‌ಗೆ ಸಂಚಾರ ಪೊಲೀಸ್ ವಿಭಾಗದ ಹೆಸರಿನಲ್ಲಿ ಲಿಂಕ್‌ಗಳನ್ನು ಕಳುಹಿಸಲಾಗುತ್ತಿದೆ. ಇದರ ಮೇಲೆ ಕ್ಲಿಕ್ ಮಾಡಿ ಮಾಹಿತಿ ಅಪ್‌ಲೋಡ್ ಮಾಡಿದರೇ ಸಾಕು ಸೈಬರ್ ಕಳ್ಳರು, ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಾರೆ. ಆದರಿಂದ ಸಾರ್ವಜನಿಕರು ಟ್ರಾಫಿಕ್ ಫೈನ್ ಪಾವತಿ ಮಾಡಬೇಕಾದರೆ ಸ್ಥಳೀಯ ಸಂಚಾರ ಠಾಣೆ ಅಥವಾ ಪೊಲೀಸರನ್ನ ಸಂಪರ್ಕ ಮಾಡಿ ಪಾವತಿಸಿ ರಸೀದಿ ಪಡೆಯಬಹುದು. ಅಥವಾಬೆಂಗಳೂರು ಓನ್, ಕರ್ನಾಟಕ ಓನ್‌ನಲ್ಲಿ ದಂಡ ಪಾವತಿಗೆ ಪೊಲೀಸರು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net