ಆಸ್ಪತ್ರೆಯಲ್ಲಿ ಭೀಕರ Fire Accident; 10 ಮಕ್ಕಳು ಸಜೀವ ದಹನ, ಹಲವು ಕಂದಮ್ಮಗಳ ಸ್ಥಿತಿ ಗಂಭೀರ

Fire Accident
Published on

ಲಖನೌ: ಶಾರ್ಟ್​ ಸರ್ಕ್ಯೂಟ್​ನಿಂದ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ (Fire Accident) 10 ಮಕ್ಕಳು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಝಾನ್ಸಿಯಲ್ಲಿರುವ ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.

ಘಟನೆಯ ಕುರಿತು ಮಾಹಿತಿ ನೀಡಿರುವ ಝಾನ್ಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವಿನಾಶ್ ಕುಮಾರ್, ಶುಕ್ರವಾರ ರಾತ್ರಿ 10:35ರ ಸುಮಾರಿಗೆ ದುರಂತ ಸಂಭವಿಸಿದ್ದು, ಈವರೆಗೂ 37 ಶಿಶುಗಳನ್ನು ರಕ್ಷಿಸಲಾಗಿದೆ. ಆಸ್ಪತ್ರೆಯಲ್ಲಿರುವ ಎರಡು ಮಕ್ಕಳ ವಾರ್ಡ್​ ಪೈಕಿ ಒಂದರಲ್ಲಿ ಶಾರ್ಟ್​ ಸರ್ಕ್ಯೂಟ್​ ಆಗಿದ್ದು, 10 ಮಕ್ಕಳು ಮೃತಪಟ್ಟಿದ್ದಾರೆ. ಆರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವಿನಾಶ್ ಕುಮಾರ್ ತಿಳಿಸಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಉತ್ತರಪ್ರದೇಶ ಉಪಮುಖ್ಯಮಂತ್ರಿ ಬ್ರಿಜೇಶ್​ ಪಾಠಕ್​, ಘಟನೆ ನಡೆದ ವೇಳೆ 54 ಮಕ್ಕಳು ಆಸ್ಪತ್ರೆತಯಲ್ಲಿ ದಾಖಲಾಗಿದ್ದರು ಎಂದು ತಿಳಿದು ಬಂದಿದೆ. 44 ಮಕ್ಕಳನ್ನು ರಕ್ಷಿಸಲಾಗಿದ್ದು, ಮೃತಪಟ್ಟ 10 ಮಕ್ಕಳು ಮೃತಪಟ್ಟಿದ್ದಾರೆ. ಈ ಪೈಕಿ ಏಳು ಮಕ್ಕಳ ಗುರುತು ಪತ್ತೆಯಾಗಿದ್ದು, ಅವಘಡಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಂತಾಪ ಸೂಚಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಝಾನ್ಸಿ ಜಿಲ್ಲೆಯ ವೈದ್ಯಕೀಯ ಕಾಲೇಜಿನ ಎನ್‌ಐಸಿಯುನಲ್ಲಿ ಸಂಭವಿಸಿದ ಅವಘಡದಲ್ಲಿ ಮಕ್ಕಳ ಸಾವು ಅತ್ಯಂತ ದುಃಖಕರ ಮತ್ತು ಹೃದಯ ವಿದ್ರಾವಕವಾಗಿದೆ. ಅಗಲಿದ ಆತ್ಮಗಳಿಗೆ ಮೋಕ್ಷ ಮತ್ತು ಗಾಯಾಳುಗಳಿಗೆ ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ಭಗವಂತ ಶ್ರೀರಾಮನನ್ನು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net