

ಜೊಹಾನ್ಸ್ಬರ್ಗ್: ಇಲ್ಲಿನ ದಿ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ (Team India) ಹಾಗೂ ದಕ್ಷಿಣ ಆಫ್ರಿಕಾ (South Africa) ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಪ್ರವಾಸಿ ತಂಡವು ಸರ್ವಾಂಗೀಣ ಪ್ರದರ್ಶನದ ಫಲವಾಗಿ 135 ರನ್ಗಳ ಭರ್ಜರಿ ಜಯ ಸಾಧಿಸಿದ್ದು, ಈ ಮೂಲಕ ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ (Team India) ನಾಯಕ ಸೂರ್ಯಕುಮಾರ್ ಯಾದವ್ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡ ಸಂಜು ಸ್ಯಾಮ್ಸನ್ (Sanju Samson) (109 ರನ್, 56 ಎಸೆತ, 6 ಬೌಂಡರಿ, 9 ಸಿಕ್ಸರ್), ತಿಲಕ್ ವರ್ಮಾ (Tilak Varma) (120 ರನ್, 47 ಎಸೆತ, 9 ಬೌಂಡರಿ, 10 ಸಿಕ್ಸರ್) ಶತಕಗಳ ಫಲವಾಗಿ 20 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 283 ರನ್ಗಳ ಬೃಹತ್ ಮೊತ್ತವನ್ನು ಪೇರಿಸಿತು.
ಇನ್ನೂ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾವನ್ನು (South Africa) ಇನ್ನಿಲ್ಲದಂತೆ ಕಾಡಿದ ಭಾರತದ ಬೌಲರ್ಗಳು ಎದುರಾಳಿ ತಂಡವನ್ನು 148 ರನ್ಗಳಿ ಆಲೌಟ್ ಮಾಡುವ ಮೂಲಕ ತಂಡಕ್ಕೆ 135 ರನ್ಗಳ ಭರ್ಜರಿ ಗೆಲುವನ್ನು ತಂದುಕೊಟ್ಟಿದ್ದಾರೆ. ಭಾರತದ ಪರ ಅರ್ಷ್ದೀಪ್ ಸಿಂಗ್ (3-0-20-3), ಹಾರ್ದಿಕ್ ಪಾಂಡ್ಯ (3-1-8-1), ರಮನ್ದೀಪ್ ಸಿಂಗ್ (3.2-0-42-1), ವರುಣ್ ಚಕ್ರವರ್ತಿ (4-0-42-2), ರವಿ ಬಿಷ್ಣೋಯಿ (3-0-28-1), ಅಕ್ಷರ್ ಪಟೇಲ್ (2-0-6-2) ರನ್ ನೀಡಿ ವಿಕೆಟ್ ಪಡೆದಿದ್ದಾರೆ.
ಸಂಜು ಸ್ಯಾಮ್ಸನ್-ತಿಲಕ್ ವರ್ಮಾ (Sanju Samson-Tilak Varma) ಅಬ್ಬರದ ಫಲವಾಗಿ ಹರಿಣಗಳ ವಿರುದ್ಧ ಬೃಹತ್ ಜಯ ಸಾಧಿಸಿರುವ ಟೀಮ್ ಇಂಡಿಯಾ ಟಿ20 ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದ್ದು, ಒಂದೇ ಪಂದ್ಯದಲ್ಲಿ ಐದು ದಾಖಲೆಗಳನ್ನು ಬರೆಯುವ ಮೂಲಕ ಕ್ರೀಡಾ ವಲಯದಲ್ಲಿ ಸೌಂಡ್ ಮಾಡುತ್ತಿದೆ.
ಟಿ20 ಸರಣಿಯ (T20 Series) ಅಂತಿಮ ಪಂದ್ಯದಲ್ಲಿ ಬರೋಬ್ಬರಿ 283 ರನ್ ಕಲೆಹಾಕುವ ಮೂಲಕ ಟೀಮ್ ಇಂಡಿಯಾ (Team India), ವಿದೇಶಿ ನೆಲದಲ್ಲಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ದೊಡ್ಡ ಮೊತ್ತ ಕಲೆಹಾಕಿದ ದಾಖಲೆ ಬರೆದಿದೆ. ಕಳೆದೆರಡು ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದ ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗರೆದರು. ಇದೇ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಸಂಜು, ಅಂತಿಮ ಪಂದ್ಯದಲ್ಲೂ ಶತಕ ಬಾರಿಸುವ ಮೂಲಕ ಟೀಕಾಕಾರರಿಗೆ ತಕ್ಕ ತಿರುಗೇಟು ನೀಡಿದ್ದಾರೆ. ಈ ಮೂಲಕ ಸಂಜು ಒಂದೇ ವರ್ಷದಲ್ಲಿ 3 ಟಿ20 ಶತಕಗಳನ್ನು ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಪಂದ್ಯದಲ್ಲಿ ಭಾರತದ ಪರ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಭರ್ಜರಿ ಶತಕ ಬಾರಿಸಿದ್ದು, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳು ಶತಕ ಸಿಡಿಸಿದ್ದು ಇದೇ ಮೊದಲು ಎಂದು ಹೇಳಲಾಗಿದೆ. ಇದಲ್ಲದೆ ಈ ಜೋಡಿಯು 210 ರನ್ಗಳ ದಾಖಲೆಯ ಜೊತೆಯಾಟವನ್ನು ಆಡಿದ್ದು, ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿದೊಡ್ಡ ಜೊತೆಯಾಟ ನಿರ್ಮಿಸಿದ ದಾಖಲೆಯನ್ನೂ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ನಿರ್ಮಿಸಿದ್ದಾರೆ.
ಇದಲ್ಲದೆ ನಾಲ್ಕನೇ ಟಿ20ಯಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳಿಂದ ಸಿಕ್ಸರ್‌ಗಳ ಮಳೆ ಸುರಿಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಒಟ್ಟು 23 ಸಿಕ್ಸರ್‌ಗಳನ್ನು ಬಾರಿಸಿತ್ತು. ಇದೀಗ ಟಿ20 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯೂ ಟೀಮ್ ಇಂಡಿಯಾ ಹೆಸರಿನಲ್ಲಿ ದಾಖಲಾಗಿದೆ. ಈ ಪಂದ್ಯದಲ್ಲಿ ಭಾರತದ ಪರ ತಿಲಕ್ ವರ್ಮಾ 10 ಸಿಕ್ಸರ್, ಸಂಜು ಸ್ಯಾಮ್ಸನ್ 9 ಮತ್ತು ಅಭಿಷೇಕ್ ಶರ್ಮಾ 4 ಸಿಕ್ಸರ್ ಬಾರಿಸಿದ್ದಾರೆ.