ಚಾರ್ಮಾಡಿ ಘಾಟ್‌ನಲ್ಲಿ 1 ತಾಸು ಟ್ರಾಫಿಕ್ ಜಾಮ್

bnk charmadi ghat
ಚಾರ್ಮಾಡಿ ಘಾಟ್‌ನಲ್ಲಿ ಕೆಟ್ಟು ನಿಂತ 16 ಚಕ್ರದ ಲಾರಿ.
Published on

ಬಣಕಲ್: ಚಾರ್ಮಾಡಿ ಘಾಟ್‌ನ 10ನೇ ತಿರುವಿನಲ್ಲಿ ಸೋಮವಾರ 16 ಚಕ್ರದ ಲಾರಿ ಕೆಟ್ಟು ನಿಂತ ಪರಿಣಾಮ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಕಲುಬುರಗಿಯಿಂದ ಮಂಗಳೂರು ಕಡೆಗೆ ಸಿಮೆಂಟ್ ತುಂಬಿಕೊಂಡು ಸಾಗುತ್ತಿದ್ದ ಲಾರಿ ಚಾರ್ಮಾಡಿ ಘಾಟ್‌ನ 10ನೇ ತಿರುವಿನಲ್ಲಿ ಕೆಟ್ಟು ನಿಂತಿತು. ಇದರಿಂದ ಬಸ್ ಸೇರಿದಂತೆ ಬೇರೆ ವಾಹನಗಳು ಸಂಚರಿಸಲು ಸಾಧ್ಯವಾಗದೆ ಸಾಲುಗಟ್ಟಿ ನಿಂತ ದೃಶ್ಯ ಕಂಡು ಬಂತು. ಸಕಾಲಕ್ಕೆ ತಲುಪಲಾಗದೆ ರೋಗಿಗಳು, ವಿದ್ಯಾರ್ಥಿಗಳು, ಪ್ರಯಾಣಿಕರು ಪರದಾಡಿದರು. ಕ್ರೇನ್ ಮೂಲಕ ಲಾರಿಯನ್ನು ತೆರವುಗೊಳಿಸಿದ ನಂತರ ವಾಹನ ಸಂಚಾರ ಸುಗಮಗೊಂಡಿತು.
ಚಾರ್ಮಾಡಿ ಘಾಟ್‌ನಲ್ಲಿ 6 ಚಕ್ರಕ್ಕಿಂತ ಹೆಚ್ಚಿನ ಚಕ್ರದ ವಾಹನಗಳ ಸಂಚಾರ ನಿಷೇಧಿಸಿದ್ದರೂ 16 ಚಕ್ರದ ಲಾರಿ ಈ ಮಾರ್ಗದಲ್ಲಿ ಸಂಚರಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೊಟ್ಟಿಗೆಹಾರದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ವಾಹನ ತಪಾಸಣೆ ನಡೆಸುತ್ತಿದ್ದರೂ 16 ಚಕ್ರದ ಲಾರಿ ಸಂಚಾರಕ್ಕೆ ಅನುಮತಿ ಕೊಟ್ಟಿದ್ದರ ಬಗ್ಗೆ ಜನರು ಅನುಮಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net