

ಬೆಂಗಳೂರು: ಯಶವಂತಪುರದ 65 ವರ್ಷದ ವ್ಯಕ್ತಿ ಮೊಬೈಲ್‌ಗೆ ಬಂದ ಲಿಂಕ್ ಬಳಸಿ 1.42 ಕೋಟಿ ರೂ. ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದು, ಉತ್ತರ ವಿಭಾಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಏ. 25ರಂದು ದೂರುದಾರನ ಮೊಬೈಲ್‌ಗೆ ಅಪರಿಚಿತ ವ್ಯಕ್ತಿ ವಾಟ್ಸ್‌ಆ್ಯಪ್‌ನಲ್ಲಿ ಲಿಂಕ್ ಕಳುಹಿಸಿದ್ದ. ಅದರ ಮೇಲೆ ದೂರುದಾರ, ಕ್ಲಿಕ್ ಮಾಡಿದಾಗ ವಿಐಪಿ-319 ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಜಾಯಿನ್ ಆಗಿದ್ದು, ಎಪಿಕೆ ಎಂಬ ಆ್ಯಪ್ ಡೌನ್‌ಲೋಡ್ ಆಗಿದೆ. ಆಗ ಭರತ್ ರೆಡ್ಡಿ ಎಂಬಾತ ಕಾಲ್ ಮಾಡಿ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗಲಿದೆ ಎಂದು ಹೇಳಿದ್ದು, ನಂಬಿದ ದೂರುದಾರ ವ್ಯಕ್ತಿ ವಿವಿಧ ಬ್ಯಾಂಕ್ ಖಾತೆಗಳಿಗೆ 1.42 ಕೋಟಿ ರೂ.ಜಮೆ ಮಾಡಿದ್ದ.
ಕೊನೆಗೆ ವಿತ್ ಡ್ರಾ ಮಾಡಲು ಹೋದಾಗ ಸಾಧ್ಯವಾಗಿಲ್ಲ ಎಂದು ದೂರಿನಲ್ಲಿ ಸಂತ್ರಸ್ತ ವ್ಯಕ್ತಿ ದೂರು ಸಲ್ಲಿಸಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.