ಡಿಜಿಟಲ್ ಅರೆಸ್ಟ್ ಮಾಡಿ 1.21 ಕೋಟಿ ವಂಚನೆ

Cyber ​​crime is increasing in Kodagu
Published on

ಬೆಂಗಳೂರು: ಫೆಡೆಕ್ಸ್ ಪಾರ್ಸೆಲ್‌ನಲ್ಲಿ ಮಾದಕದ್ರವ್ಯ, ಪಾಸ್ ಪೋರ್ಟ್, ಸಿಮ್ ಕಾರ್ಡ್ ಕಳುಹಿಸುತ್ತಿರುವುದಾಗಿ ವ್ಯಕ್ತಿಯನ್ನು ಡಿಜಿಟಲ್ ಅರೆಸ್ಟ್ ಮಾಡಿ ಸೈಬರ್ ಕಳ್ಳರು 1.21 ಕೋಟಿ ರೂ. ಸುಲಿಗೆ ಮಾಡಿದ್ದಾರೆ. ಮೈಕೋ ಲೇಔಟ್ ನಿವಾಸಿ ರಾಜೀಬ್ ದಾಸ್ ಶರ್ಮ ವಂಚನೆಗೆ ಒಳಗಾದವರು. ದಕ್ಷಿಣ ವಿಭಾಗ ಸಿಇಎನ್ ಠಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

4ರ ಬೆಳಗ್ಗೆ ರಾಜೀಬ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ತಾನು ಫೆಡೆಕ್ಸ್ ನೌಕರ ಎಂದು ಪರಿಚಯಿಸಿಕೊಂಡಿದ್ದಾನೆ. ಮುಂಬೈನಿಂದ ಮಾತನಾಡುತ್ತಿರುವುದಾಗಿ ಹೇಳಿದ್ದಾನೆ. ನಿಮ್ಮ ಆಧಾರ್ ಬಳಸಿ ಥೈಲ್ಯಾಂಡ್‌ಗೆ ಪಾರ್ಸೆಲ್ ಹೋಗುತ್ತಿದ್ದು, ಮುಂಬೈ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಪಾರ್ಸೆಲ್‌ನಲ್ಲಿ 3 ಪಾಸ್‌ಪೋರ್ಟ್, 7 ಸಿಮ್ ಕಾರ್ಡ್, 200 ಗ್ರಾಂ ಎಂಡಿಎಂಎ, 4 ಚೆಕ್‌ಬುಕ್ ಪತ್ತೆಯಾಗಿದೆ.

ಈ ಬಗ್ಗೆ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈಗ ನಿಮ್ಮ ಮೊಬೈಲ್‌ಗೆ ಪೊಲೀಸರು ಕರೆ ಮಾಡುತ್ತಾರೆ ಎಂದು ಹೇಳಿದ್ದಾನೆ. ಇದೇ ವೇಳೆಗೆ ಅರ್ಜುನ್ ಎಂಬಾತ ರಾಜೀಬ್‌ಗೆ ಕರೆ ಮಾಡಿ ಮುಂಬೈ ಸೈಬರ್ ಕ್ರೈಂ ವಿಭಾಗದ ಪೊಲೀಸ್ ಎಂದು ತಿಳಿಸಿದ್ದಾನೆ. ವಿಚಾರಣೆ ಸಲುವಾಗಿ ಸೈಬರ್ ಕ್ರೈಂ ವಿಭಾಗದಿಂದ ಎಸ್‌ಐ ಮೋಹನ್ ಸಿಂಗ್ ಕರೆ ಮಾಡುತ್ತಾರೆ ಎಂದು ಹೇಳಿ ಕರೆ ಕಟ್ ಮಾಡಿದ್ದಾನೆ. ಮೋಹನ್ ಸಿಂಗ್ ಕರೆ ಮಾಡಿ ರಾಜೀಬ್ ವೈಯಕ್ತಿಕ ಮಾಹಿತಿ ಸಂಗ್ರಹಿಸಿದ್ದಾನೆ. ಬಳಿಕ ಬ್ಯಾಂಕ್ ಖಾತೆ ವಿವರ ಪಡೆದ ಸೈಬರ್ ಕಳ್ಳ, ‘ನಿಮ್ಮ ಬ್ಯಾಂಕ್ ಖಾತೆಯಿಂದ ಮನಿಲ್ಯಾಂಡ್ರಿಂಗ್ ದಂಧೆ ನಡೆದಿದೆ. ವರ್ಚುವಲ್ ವಿಚಾರಣೆ ನಡೆಸಬೇಕಿದೆ. ತಕ್ಷಣ ಸ್ಕೈಪ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಲೈವ್‌ಗೆ ಬರುವಂತೆ ಸೂಚಿಸಿದ್ದಾನೆ.

ಹೆದರಿದ ರಾಜೀಬ್, ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ವಿಡಿಯೋ ಕಾಲ್ ಮಾಡಿದಾಗ ಆದಿತ್ಯಾ ಎಂಬಾತ ಕರೆ ಸ್ವೀಕರಿಸಿ ಸಿಬಿಐ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಡ್ರಗ್ಸ್ ದಂಧೆ, ಮಕ್ಕಳ ಕಳ್ಳಸಾಗಾಣಿಕೆ ಮತ್ತು ಮನಿ ಲ್ಯಾಂಡ್ರಿಂಗ್ ಆರೋಪದ ಮೇಲೆ ನಿಮ್ಮ ವಿರುದ್ಧ ಕೇಸ್ ದಾಖಲಾಗಿವೆ ಎಂದು ಬೆದರಿಸಿದ್ದಾನೆ. ವರ್ಚುವಲ್ ವಿಚಾರಣೆ ನಡೆಸಬೇಕೆಂದು ರಾಜೀಬ್‌ನನ್ನು ಡಿಜಿಟಲ್ ಆರೆಸ್ಟ್ ಮಾಡಿದ ಸೈಬರ್ ಕಳ್ಳರು, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಎಲ್ಲ ಹಣವನ್ನು ಆರ್‌ಬಿಐಗೆ ವರ್ಗಾವನೆ ಮಾಡಿ. 24 ತಾಸಿನಲ್ಲಿ ವಾಪಸ್ ಬರಲಿದೆ ಎಂದು ಹೇಳಿ ತಮ್ಮಬ್ಯಾಂಕ್ ಖಾತೆಗೆ ಹಂತಹಂತವಾಗಿ 1.21 ಕೋಟಿ ರೂ. ವರ್ಗಾವಣೆ ಮಾಡಿಕೊಂಡಿದ್ದಾರೆ. ಆನಂತರ ಸಂಪರ್ಕ ಕಡಿತ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net