

ಬೆಂಗಳೂರು: ಟೀಸರ್ ಮತ್ತು ಪಾತ್ರ ಪರಿಚಯದ ಮೂಲಕವೇ ಮೆಚ್ಚುಗೆಗೆ ಪಾತ್ರವಾಗಿರುವ ‘ವಿಜಯಾನಂದ’ ಚಿತ್ರದಿಂದ ಹೊಸವರ್ಷಕ್ಕೆ ಹೊಸ ಪೋಸ್ಟರ್ ಹೊರಬಂದಿದೆ. ವಿಜಯ ಸಂಕೇಶ್ವರ ಪಾತ್ರಧಾರಿ ನಿಹಾಲ್ ರಜಪೂತ್ ಮತ್ತು ಆನಂದ ಸಂಕೇಶ್ವರ ಪಾತ್ರಧಾರಿ ಭರತ್ ಬೋಪಣ್ಣ ಅವರ ಫೋಟೋ, ಬಿಡುಗಡೆ ಆಗಿರುವ ಪೋಸ್ಟರ್ನಲ್ಲಿದೆ.
ಸಾರಿಗೆ ಹಾಗೂ ಪತ್ರಿಕೋದ್ಯಮದಲ್ಲಿ ಜಾಗತಿಕ ಮನ್ನಣೆಗೆ ಪಾತ್ರರಾಗಿರುವ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ಕಥೆ ಇದಾಗಿದ್ದು, ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ವಿಆರ್ಎಲ್ ಫಿಲಂಸ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ‘ವಿಜಯಾನಂದ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಸದ್ಯ ಶೂಟಿಂಗ್ ಹಂತದಲ್ಲಿರುವ ಈ ಚಿತ್ರದ ಬಗ್ಗೆ ನಿರ್ದೇಶಕಿ ರಿಶಿಕಾ ಶರ್ಮ ಒಂದಷ್ಟು ಅಪ್ಡೇಟ್ ನೀಡಿದ್ದಾರೆ. ‘ಈಗಾಗಲೇ ಹುಬ್ಬಳ್ಳಿ, ಧಾರವಾಡ, ಶಿಗ್ಗಾಂವಿಯಲ್ಲಿ ಚಿತ್ರದ ಶೇ. 60 ಭಾಗದ ಶೂಟಿಂಗ್ ಮುಗಿದಿದೆ. ರಾಮೋಜಿ ಫಿಲಂ ಸಿಟಿ, ಅಗಡಿ ತೋಟ ಮತ್ತು ಬೆಂಗಳೂರಿನಲ್ಲಿಯೂ ಚಿತ್ರೀಕರಣ ಮಾಡಬೇಕಿದೆ. ಅಂದಾಜು 30 ದಿನಗಳಲ್ಲಿ ಇಡೀ ಸಿನಿಮಾ ಶೂಟಿಂಗ್ ಮುಗಿಸಲಿದ್ದೇವೆ’ ಎನ್ನುತ್ತಾರವರು.
ಚಿತ್ರದಲ್ಲಿ ಹಿರಿಯ ನಟ ಅನಂತ್ ನಾಗ್, ರವಿಚಂದ್ರನ್, ವಿನಯಾ ಪ್ರಸಾದ್, ಭರತ್ ಬೋಪಣ್ಣ, ಸಿರಿ, ಅರ್ಚನಾ ಕೊಟ್ಟಿಗೆ, ಶೈನ್ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮಲಯಾಳಂ ಮತ್ತು ತೆಲುಗು ಚಿತ್ರರಂಗಗಳಲ್ಲಿ ಬೇಡಿಕೆಯ ಸಂಗೀತ ನಿರ್ದೇಶಕ ಎನಿಸಿರುವ ಗೋಪಿ ಸುಂದರ್ ‘ವಿಜಯಾನಂದ’ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ‘ಕಡಲ ತೀರದ ಭಾರ್ಗವ’ ಮತ್ತು ‘ಮಹಿರಾ’ ಸಿನಿಮಾ ಖ್ಯಾತಿಯ ಕೀರ್ತನ್ ಪೂಜಾರಿ ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆ, ಹೇಮಂತ್ ಕುಮಾರ್ ಡಿ, ಸಂಕಲನ, ಇರ್ವನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಲಿದ್ದಾರೆ.