ಚಿನ್ನದ ಬೆಲೆಯಲ್ಲಿ 40% ಕುಸಿತವಾಗಲಿದೆ! ಇದೇನು ಮಾರ್ನಿಂಗ್‌ಸ್ಟಾರ್ ವಿಶ್ಲೇಷಕರ ಲೆಕ್ಕಾಚಾರ? Gold news

gold price
Published on

Gold | ಚಿನ್ನದ ಬೆಲೆ ಗಗನಕ್ಕೇರಿರೋದು ಎಲ್ಲರಿಗೂ ತಿಳಿದಿರೋ ವಿಷಯ. ಕಳೆದ ಕೆಲವು ದಿನಗಳಿಂದ ಬಂಗಾರದ ಬೆಲೆ ಸಿಕ್ಕಾಪಟ್ಟೆ ದುಬಾರಿ ಆಗ್ತಾ ಇದೆ. ಜಾಗತಿಕ ಮಾರುಕಟ್ಟೆ ಪರಿಸ್ಥಿತಿ, ಟ್ರಂಪ್ ಅವರ ನಿರ್ಧಾರಗಳು, ಯುದ್ಧಗಳ ಕಾರಣದಿಂದ ಬಂಗಾರದ ಬೆಲೆಯಲ್ಲಿ ಏರಿಕೆಯಾಗಿದೆ. ಆದ್ರೆ ಈ ಎಲ್ಲದರ ನಡುವೆ ಮುಂದಿನ ದಿನಗಳಲ್ಲಿ ಬಂಗಾರದ ಬೆಲೆ ಸಾಕಷ್ಟು ಇಳಿಕೆಯಾಗಲಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

24 ಕ್ಯಾರೆಟ್ ಚಿನ್ನದ ಬೆಲೆ ಭಾರತೀಯ ಮಾರುಕಟ್ಟೆಗಳಲ್ಲಿ 10 ಗ್ರಾಂಗೆ 90,000 ರೂ.ಗಳ ಸಮೀಪದಲ್ಲಿದೆ. ಆದರೆ ಮುಂದಿನ ದಿನಗಳಲ್ಲಿ ಚಿನ್ನವು 40% ರಷ್ಟು ಕುಸಿತ ಕಾಣಲಿದ್ದು, ಭಾರತದಲ್ಲಿ 10 ಗ್ರಾಂಗೆ ಸುಮಾರು 55,000 ರೂ.ಗಳಿಗೆ ಇಳಿಯಬಹುದು ಎಂದು ಅಮೆರಿಕ ಮೂಲದ ಹಣಕಾಸು ಸೇವಾ ಸಂಸ್ಥೆ ಮಾರ್ನಿಂಗ್‌ಸ್ಟಾರ್‌ನ ಮಾರುಕಟ್ಟೆ ತಂತ್ರಜ್ಞ ಜಾನ್ ಮಿಲ್ಸ್ ವಿಶ್ಲೇಷಿಸಿದ್ದಾರೆ.

ಚಿನ್ನ ಏರಿಕೆಗೆ ಕಾರಣವೇನು?

gold loan

ಆರ್ಥಿಕ ಸ್ಥಿತಿ, ಹಣದುಬ್ಬರ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಚಿನ್ನದ ಇತ್ತೀಚಿನ ಏರಿಕೆಗೆ ಕಾರಣವಾಗಿವೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕಾರದ ಅವಧಿಯಲ್ಲಿ ಆರಂಭವಾದ ವ್ಯಾಪಾರ ವಿವಾದಗಳ ಮಧ್ಯೆ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಆಸ್ತಿಯನ್ನಾಗಿ ಬಳಸಿಕೊಂಡಿದ್ದಾರೆ. ಅಂದಹಾಗೆ ಈಗ ಬೆಲೆಗಳು ಕೆಳಮುಖವಾಗಲು ಹಲವಾರು ಅಂಶಗಳು ಕಾರಣವಾಗಬಹುದು.

ಹೆಚ್ಚಿದ ಪೂರೈಕೆ:

ಚಿನ್ನದ ಉತ್ಪಾದನೆ ಹೆಚ್ಚಾಗಿದೆ, 2024 ರ ಎರಡನೇ ತ್ರೈಮಾಸಿಕದಲ್ಲಿ ಗಣಿಗಾರಿಕೆ ಲಾಭವು ಔನ್ಸ್‌ಗೆ $950 ತಲುಪಿದೆ. ಜಾಗತಿಕ ಮೀಸಲು 9% ರಷ್ಟು ವಿಸ್ತರಿಸಿ, 2,16,265 ಟನ್‌ಗಳಿಗೆ ತಲುಪಿದೆ, ನಿರ್ದಿಷ್ಟವಾಗಿ ಆಸ್ಟ್ರೇಲಿಯಾ ತನ್ನ ಚಿನ್ನದ ಉತ್ಪಾದನೆಯನ್ನು ಹೆಚ್ಚಿಸಿದ್ದರಿಂದ ಹಳೆಯ ಚಿನ್ನದ ಮರುಬಳಕೆ ಕೂಡ ಹೆಚ್ಚಾಗಿದೆ. ಈ ಎಲ್ಲಾ ಪೂರೈಕೆಯಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಉಂಟಾಗುವ ಸಾಧ್ಯತೆ ಇದೆ.

ಕುಸಿಯುತ್ತಿರುವ ಬೇಡಿಕೆ!

Gold

ಕೇಂದ್ರೀಯ ಬ್ಯಾಂಕುಗಳು ಕಳೆದ ವರ್ಷ 1,045 ಟನ್ ಚಿನ್ನವನ್ನು ಖರೀದಿ ಮಾಡಿವೆ. ಇದು ಸತತ ಮೂರನೇ ವರ್ಷ 1,000 ಟನ್‌ಗಳಿಗೂ ಚಿನ್ನ ಖರೀದಿ ಮಾಡಿರುವುದಾಗಿ ತಿಳಿದು ಬಂದಿದೆ. ಆದಾಗ್ಯೂ ವಿಶ್ವ ಚಿನ್ನದ ಮಂಡಳಿಯ ಸಮೀಕ್ಷೆಯ ಪ್ರಕಾರ, 71% ಕೇಂದ್ರೀಯ ಬ್ಯಾಂಕುಗಳು ತಮ್ಮ ಚಿನ್ನದ ಹಿಡುವಳಿಗಳನ್ನು ಹೆಚ್ಚಿಸುವ ಬದಲು ಕಡಿಮೆ ಮಾಡುವ ನಿರೀಕ್ಷೆಯಿದೆ. COVID-19 ಸಾಂಕ್ರಾಮಿಕದಂತಹ ಪ್ರಮುಖ ಬಿಕ್ಕಟ್ಟುಗಳ ನಂತರ, ಆರ್ಥಿಕ ಸ್ಥಿರತೆ ಮರಳುತ್ತಿದ್ದಂತೆ ಚಿನ್ನದ ಬೆಲೆಗಳು ಏರಿಕೆಯಾಗಿ ನಂತರ ಕುಸಿತ ಕಾಣುವ ಸಾಧ್ಯತೆ ಹೆಚ್ಚಾಗಿದೆ.

ಗೋಲ್ಡ್‌ಮನ್ ಸ್ಯಾಚ್ಸ್ ನಿರೀಕ್ಷೆ ಏನು?

ಹಣಕಾಸು ಸೇವಾ ಸಂಸ್ಥೆ ಮಾರ್ನಿಂಗ್‌ಸ್ಟಾರ್‌ನ ಮಾರುಕಟ್ಟೆ ತಂತ್ರಜ್ಞ ಜಾನ್ ಮಿಲ್ಸ್ ಅವರ ವಿಶ್ಲೇಷಣೆಯ ಹೊರತಾಗಿ, ಕೆಲವು ಪ್ರಮುಖ ಹಣಕಾಸು ಸಂಸ್ಥೆಗಳು ಇದರ ಬಗ್ಗೆ ವರದಿ ಬಿಡುಗಡೆ ಮಾಡಿವೆ. ಬ್ಯಾಂಕ್ ಆಫ್ ಅಮೇರಿಕಾ ಮುಂದಿನ ಎರಡು ವರ್ಷಗಳಲ್ಲಿ ಚಿನ್ನವು ಪ್ರತಿ ಔನ್ಸ್‌ಗೆ $3,500 ತಲುಪಬಹುದು ಎಂದು ಭವಿಷ್ಯ ನುಡಿದರೆ, ಗೋಲ್ಡ್‌ಮನ್ ಸ್ಯಾಚ್ಸ್ ವರ್ಷಾಂತ್ಯದ ಬೆಲೆಯು ಪ್ರತಿ ಔನ್ಸ್‌ಗೆ $3,300 ಎಂದು ತಿಳಿಸಿದೆ. ಒಟ್ಟಿನಲ್ಲಿ ಚಿನ್ನವು ತನ್ನ ವೇಗವನ್ನು ಹೆಚ್ಚಿಸಿಕೊಳ್ಳುತ್ತದೆಯೋ ಅಥವಾ ಕುಸಿತವನ್ನು ಎದುರಿಸುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net