

ಗುಜರಾತ್ : ನಾವೆಲ್ಲರೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು? ಜಗತ್ತಿನ ಅತ್ಯಂತ ಶ್ರೀಮಂತ ದೇಶ ಯಾವುದು ಎಂಬುದನ್ನು ತಿಳಿದಿರುತ್ತೇವೆ. ಆದರೆ ಇಡೀ ಜಗತ್ತಿನ ಅತ್ಯಂತ ಶ್ರೀಮಂತ ಗ್ರಾಮ ಯಾವುದು ಎಂಬುದು ಹಲವರಿಗೆ ಗೊತ್ತಿಲ್ಲ. ಭಾರತವು 284 ಶತಕೋಟ್ಯಾಧಿಪತಿಗಳ ನೆಲೆಯಾಗಿದೆ, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ನಂತರ ವಿಶ್ವದ ಮೂರನೇ ಹೆಚ್ಚು ಶ್ರೀಮಂತರಿರುವ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಆದರೆ ಏಷ್ಯಾದ ಅತ್ಯಂತ ಶ್ರೀಮಂತ ಹಳ್ಳಿ ಬೇರೆ ಯಾವ ದೇಶದಲ್ಲೂ ಇಲ್ಲ, ಬದಲಿಗೆ ನಮ್ಮ ದೇಶವಾದ ಭಾರತದಲ್ಲೇ ಇದೆ.
ಹೌದು, ಗುಜರಾತ್‌ನ ಕಚ್ ಜಿಲ್ಲೆಯ ಮಾಧಾಪರ್ ಎಂಬ ಗ್ರಾಮವನ್ನ ಏಷ್ಯಾದ ಅತ್ಯಂತ ಶ್ರೀಮಂತ ಹಳ್ಳಿ ಎಂದು ಗುರುತಿಸಲಾಗಿದೆ. ಸುಮಾರು 32,000 ಜನಸಂಖ್ಯೆಯನ್ನು ಹೊಂದಿರುವ ಈ ಒಂದು ಸಣ್ಣ ಹಳ್ಳಿಯಲ್ಲಿ ಇಲ್ಲಿನ ನಿವಾಸಿಗಳು ತಮ್ಮ ಬ್ಯಾಂಕ್‌ಗಳಲ್ಲಿ 7000 ಕೋಟಿ ರೂಪಾಯಿಗಳ ಸ್ಥಿರ ಠೇವಣಿ ಇಟ್ಟಿದ್ದಾರೆ. ಇಲ್ಲಿನ ಅನಿವಾಸಿ ಭಾರತೀಯರು ಪ್ರಮುಖವಾಗಿ ಆಫ್ರಿಕಾ, ಅಮೆರಿಕ, ಯುಕೆ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಲ್ಲಿ ನೆಲೆಸಿದ್ದು, ತಮ್ಮ ಹಳ್ಳಿಗಳಿಗೆ ಹೆಚ್ಚಿನ ಪ್ರಮಾಣದ ಹಣವನ್ನು ಕಳುಹಿಸುತ್ತಾರಂತೆ.
ಇದಲ್ಲದೆ, ಇಲ್ಲಿನ ಅನಿವಾಸಿ ಭಾರತೀಯರ ಗಣನೀಯ ಆರ್ಥಿಕ ಕೊಡುಗೆಯಿಂದಾಗಿ, ಕೃಷಿಯು ಮಾಧಾಪುರಕ್ಕೆ ಮತ್ತೊಂದು ಪ್ರಮುಖ ಸಂಪತ್ತಿನ ಮೂಲವಾಗಿದೆ, ಮಾವು, ಜೋಳ ಮತ್ತು ಕಬ್ಬು ಪ್ರಾಥಮಿಕ ಉತ್ಪನ್ನಗಳಾಗಿವೆ, ಇದನ್ನು ಸ್ಥಳೀಯವಾಗಿ ಮತ್ತು ದೇಶಾದ್ಯಂತ ಮಾರಾಟ ಮಾಡಲಾಗುತ್ತದೆ. ಅನಿವಾಸಿ ಭಾರತೀಯರ ಸಂಪತ್ತಿನ ಹೊರತಾಗಿ, ಮಧಾಪುರದ ಆರ್ಥಿಕತೆಯು ಕೃಷಿಯ ಸುತ್ತ ಸುತ್ತುತ್ತದೆ ಮತ್ತು ಹೆಚ್ಚಿನ ರೈತರು ಆರ್ಥಿಕವಾಗಿ ಸ್ಥಿರತೆಯನ್ನು ಕಾಯ್ದುಕೊಂಡಿದ್ದಾರೆ.
ಮಧಾಪರ್‌ನಲ್ಲಿ ಗಳಿಸಿದ ಹಣ ಬ್ಯಾಂಕ್ ಖಾತೆಗಳಲ್ಲಿ ನಿಷ್ಕ್ರಿಯವಾಗಿ ಉಳಿಯುವುದಿಲ್ಲ. ಬದಲಾಗಿ ಇದು ಗ್ರಾಮವನ್ನು ಅಭಿವೃದ್ಧಿಯ ಮಾದರಿಯನ್ನಾಗಿ ಬದಲಾಯಿಸುತ್ತದೆ. ಈ ಹಣದಿಂದ ಉತ್ತಮ ರಸ್ತೆಗಳು, ಸರೋವರಗಳು, ಶಾಲೆಗಳು, ಕಾಲೇಜುಗಳು, ಆರೋಗ್ಯ ಕೇಂದ್ರಗಳು ಮತ್ತು ದೇವಾಲಯಗಳನ್ನು ನಿರ್ಮಿಸಲಾಗಿದೆ. ಅನಿವಾಸಿ ಭಾರತೀಯರ ಹೂಡಿಕೆಗಳು ಮಾಧಾಪುರವನ್ನು ಸಂಪತ್ತಿನ ಕೇಂದ್ರವನ್ನಾಗಿ ಮಾಡಿದ್ದು, ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳು ಎಲ್ಲರ ಗಮನ ಸೆಳೆದಿವೆ. ಪ್ರಸ್ತುತ ಇಲ್ಲಿ SBI, HDFC, ICICI, PNB ಮತ್ತು ಇನ್ನೂ ಹಲವು ಸೇರಿದಂತೆ ಒಟ್ಟು 17 ಬ್ಯಾಂಕುಗಳಿವೆ.
ಪ್ರಪಂಚದಾದ್ಯಂತ ಹರಡಿರುವ ಗ್ರಾಮಸ್ಥರು ಮಧಾಪರ್‌ನ ಅಭಿವೃದ್ಧಿಗಾಗಿ ಹಣವನ್ನು ದಾನ ಮಾಡುತ್ತಾರೆ. ಇದರಿಂದ ಗ್ರಾಮ ಮತ್ತು ಅಲ್ಲಿನ ಜನರು ಒಟ್ಟಾಗಿ ಅಭಿವೃದ್ಧಿ ಹೊಂದಲು ಸಹಾಯವಾಗುತ್ತದೆ. ಆಶ್ಚರ್ಯಕರವೆಂದರೆ, ಇಲ್ಲಿನ ಹೆಚ್ಚಿನ ಸಂಪತ್ತು ಆಫ್ರಿಕಾದಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅನಿವಾಸಿ ಭಾರತೀಯರಿಂದ ಬರುತ್ತದೆ. ಅವರು ಕಳುಹಿಸುವ ಹಣವು ಗ್ರಾಮದ ಆರ್ಥಿಕತೆಗೆ ನಿರಂತರವಾಗಿ ಕೊಡುಗೆ ನೀಡುತ್ತಲೇ ಇದೆ.