ಟಾಲಿವುಡ್ ಸ್ಪೆಷಲ್​: ಹೊಸ ವರ್ಷಕ್ಕೆ ಹೊಸ ಚಿತ್ರಗಳ ಬಿಡುಗಡೆ

Telugu Films - Final
Published on

ಹೈದರಾಬಾದ್​: ಚಿತ್ರಪ್ರದರ್ಶನ ಪ್ರಾರಂಭಿಸಬಹುದು ಎಂದು ಕೇಂದ್ರ ಸರ್ಕಾರವೇನೋ ಅನುಮತಿ ನೀಡಿದ್ದಾಗಿದೆ. ಅದರಂತೆ, ಕಳೆದೊಂದು ವಾರದಿಂದ ಒಂದಿಷ್ಟು ಚಿತ್ರಗಳ ಬಿಡುಗಡೆಯಾಗಿವೆ. ಬಿಡುಗಡೆ ಎನ್ನುವುದಕ್ಕಿಂತ ಮರುಬಿಡುಗಡೆ ಅದಕ್ಕೆ ಸೂಕ್ತವಾದ ಪದ. ಏಕೆಂದರೆ, ಲಾಕ್​ಡೌನ್​ಗೂ ಮುನ್ನ ಬಿಡುಗಡೆಯಾದ ಚಿತ್ರಗಳೆಲ್ಲಾ ಇನ್ನೊಂದು ರೌಂಡ್​ ಬಂದು ಹೋಗುತ್ತಿವೆ.

ಇದು ಬರೀ ಕರ್ನಾಟಕದ ವಿಷಯವಷ್ಟೇ ಅಲ್ಲ, ಎಲ್ಲಾ ರಾಜ್ಯಗಳಲ್ಲೂ ಮತ್ತು ಭಾಷೆಯ ಚಿತ್ರರಂಗಗಳಲ್ಲೂ ಸದ್ಯ ಹಳೆಯ ಚಿತ್ರಗಳೇ ಮರುಬಿಡುಗಡೆಯಾಗುತ್ತಿವೆ. ತೆಲುಗಿನಲ್ಲೂ ನಿರ್ಮಾಪಕರೆಲ್ಲಾ ಒಂದು ತೀರ್ಮಾನಕ್ಕೆ ಬಂದಿದ್ದು, ಈ ವರ್ಷ ಬಿಟ್ಟು, ಮುಂದಿನ ವರ್ಷದಿಂದಲೇ ಹೊಸ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ.

ತೆಲುಗಿನಲ್ಲಿ ಇತ್ತೀಚಿನ ದಿನಗಳಲ್ಲಿ ಒಂದಿಷ್ಟು ನಿರೀಕ್ಷೆಯ ಚಿತ್ರಗಳು ನಿರ್ಮಾಣವಾಗಿದ್ದು, ಲಾಕ್​ಡೌನ್ ಇಲ್ಲದಿದ್ದರೆ ಇಷ್ಟರಲ್ಲಿ ಆ ಚಿತ್ರಗಳು ಬಿಡುಗಡೆಯಾಗಬೇಕಿತ್ತು. ಲಾಕ್​ಡೌನ್​ನಿಂದಾಗಿ ಎಲ್ಲರ ಯೋಚನೆಗಳೂ ಇದೀಗ ತಲೆ ಕೆಳಗಾಗಿವೆ. ಸದ್ಯಕ್ಕೆ ಬಿಡುಗಡೆ ಮಾಡಿದರೂ, ನೂರೆಂಟು ಸಮಸ್ಯೆಗಳಿವೆ. ಹಾಗಾಗಿ ಈ ವರ್ಷ ಬಿಟ್ಟು ಮುಂದಿನ ವರ್ಷಕ್ಕೆ ಹೊಸ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ನಿಮಾರ್ಪಕರು ಚಿಂತಿಸಿದ್ದಾರೆ.

ಮೊದಲ ಹಂತವಾಗಿ, ಪವನ್​ ಕಲ್ಯಾಣ್​ ಅಭಿನಯದ 'ವಕೀಲ್​ ಸಾಬ್​' ಚಿತ್ರವು ಸಂಕ್ರಾಂತಿಗೆ ಬಿಡುಗಡೆಯಾಗಲಿದೆಯಂತೆ. ಮುಂದಿನ ವರ್ಷ ಬಿಡುಗಡೆಯಾಗಲಿರುವ ಮೊದಲ ದೊಡ್ಡ ಚಿತ್ರ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ. ರಾಮ್​ ಅಭಿನಯದ 'ರೆಡ್​' ಸಹ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಇನ್ನು ರಾಣಾ ದಗ್ಗುಬಾಟಿ ಅಭಿನಯದ 'ಅರಣ್ಯಂ', ಅಖಿಲ್​ ಅಭಿನಯದ 'ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​' ಮುಂತಾದ ಚಿತ್ರಗಳು ಈಗಾಗಲೇ ಬಿಡುಗಡೆಯಾಗುವುದಕ್ಕೆ ಕ್ಯೂನಲ್ಲಿ ನಿಂತಿದ್ದು, ಸಂಕ್ರಾಂತಿಯ ನಂತರ ಒಂದೊಂದೇ ಚಿತ್ರಗಳು ಬಿಡುಗಡೆಯಾಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net