

ಹೈದರಾಬಾದ್: ಇಂದು (ಅಕ್ಟೋಬರ್ 23) ಟಾಲಿವುಡ್ ನಟ ಪ್ರಭಾಸ್ ಅವರ ಹುಟ್ಟುಹಬ್ಬ. ಈ ಹುಟ್ಟುಹಬ್ಬದ ಸಂದರ್ಭದಲ್ಲಿ ‘ರಾಧೆ ಶ್ಯಾಮ್’ ತಂಡದವರು ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದಾರೆ. ಹುಟ್ಟುಹಬ್ಬಕ್ಕೆ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಇದಕ್ಕೂ ಮೊದಲು ಚಿತ್ರದ ಒಂದು ಪೋಸ್ಟರ್ ಮತ್ತು ನಾಯಕಿಯನ್ನು ಪರಿಚಯಿಸುವ ಒಂದು ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಇದೀಗ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.
ಪಕ್ಕಾ ಲವ್ಸ್ಟೋರಿ ಹಿಡಿದು ಬಂದಿರುವ ನಿರ್ದೇಶಕ ರಾಧಾಕೃಷ್ಣ ಕುಮಾರ್, ಅಷ್ಟೇ ಸೊಗಸಾಗಿ ಮೋಷನ್ ಪೋಸ್ಟರ್ ಸೃಷ್ಟಿಮಾಡಿದ್ದಾರೆ. ಟ್ರೇನ್ ಒಳಗೆ ನಾಯಕ ಮತ್ತು ನಾಯಕಿಯ ಎಂಟ್ರಿಯನ್ನು ಪ್ರಭಾಸ್ ಜನ್ಮದಿನಕ್ಕೆ ಉಡುಗೊರೆಯಾಗಿ ನೀಡಿದ್ದಾರೆ.
ಇನ್ನು ಈ ಮೊದಲು ಹೇಳಿದಂತೆ ಪ್ರಭಾಸ್ ಹುಟ್ಟುಹಬ್ಬಕ್ಕೆ ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗುತ್ತದೆ ಎಂದೇ ಹೇಳಲಾಗಿತ್ತು. ಆದರೆ, ಅದ್ಯಾವದರ ಗೋಜಿಗೆ ಹೋಗದ ತಂಡ ಕೇವಲ ಮೋಷನ್ ಪೋಸ್ಟರ್ ಅಷ್ಟೇ ಬಿಡುಗಡೆ ಮಾಡಿದೆ. ಈಗಾಗಲೇ ಚಿತ್ರದ ಆರ್ಧದಷ್ಟು ಚಿತ್ರೀಕರಣ ಮುಗಿದಿದ್ದು, ಮುಂದಿನ ಎರಡು ತಿಂಗಳಲ್ಲಿ ಚಿತ್ರೀಕರಣ ಸಂಪೂರ್ಣವಾಗಲಿದೆಯಂತೆ. ಆ ನಂತರ, ಮುಂದಿನ ವರ್ಷ ಚಿತ್ರ ಬಿಡುಗಡೆ ಎಂದು ಹೇಳಲಾಗುತ್ತಿದೆ.
ಈ ನಡುವೆ ‘ಬಾಹುಬಲಿ 2’ ಬಿಡುಗಡೆಯಾದ ದಿನವೇ ‘ರಾಧೆ ಶ್ಯಾಮ್’ ಸಹ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ‘ಬಾಹುಬಲಿ 2’ ಚಿತ್ರವು ಏಪ್ರಿಲ್ 28ಕ್ಕೆ ಬಿಡುಗಡೆಯಾಗಿತ್ತು. ಈಗ ‘ರಾಧೆ ಶ್ಯಾಮ್’ ಚಿತ್ರವನ್ನು ಸಹ ಏಪ್ರಿಲ್ 28 ಅಥವಾ ಅದೇ ವಾರದಲ್ಲಿ ರಿಲೀಸ್ ಮಾಡುವುದು ಚಿತ್ರತಂಡದ ಯೋಚನೆ.