

ಲಖನೌ: ಮುಂಬೈನಲ್ಲಿ ಐಸ್ ಕ್ರೀಮ್ ಕೋನ್ ನಲ್ಲಿ ತುಂಡರಿಸಿದ ಬೆರಳು ಪತ್ತೆಯಾದ ಬೆನ್ನಲ್ಲೇ ಇದೀಗ ಐಸ್ ಕ್ರೀಂ ಕಂಟೈನರ್ ನಲ್ಲಿ ಶತಪದಿ ಪತ್ತೆಯಾಗಿರುವ ಪ್ರಕರಣ ಉತ್ತರ ಪ್ರದೇಶದ ನೋಯ್ಡಾದಲ್ಲಿ ಬೆಳಕಿಗೆ ಬಂದಿದೆ.
ಸೆಕ್ಟರ್ -12ರಲ್ಲಿ ವಾಸಿಸುವ ದೀಪಾ ಎಂಬುವವರು ಆನ್‌ಲೈನ್ ಡೆಲಿವರಿ ಅಪ್ಲಿಕೇಶನ್ ಬ್ಲಿಂಕಿಟ್‌ನಿಂದ ಐಸ್‌ಕ್ರೀಂ ಅನ್ನು ಆರ್ಡರ್ ಮಾಡಿದ್ದರು. ಐಸ್‌ಕ್ರೀಂ ಕಂಟೈನರ್ ತೆರೆದಾಗ ಐಸ್‌ಕ್ರೀಂ ಒಳಗೆ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಸತ್ತ ಜರಿ ಹುಳು ಪತ್ತೆಯಾಗಿದೆ. ನಂತರ ಅವರು ಸಾಮಾಜಿಕ ಮಾಧ್ಯಮದಲ್ಲಿ ಐಸ್ಕ್ರೀಂನಲ್ಲಿ ಪತ್ತೆಯಾದ ಜರಿ ಹುಳುವಿನ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ಕುಟುಂಬಸ್ಥರು ಅಮುಲ್‌ನಂತಹ ಹೆಸರಾಂತ ಬ್ರಾಂಡ್‌ನ ಉತ್ಪನ್ನದಲ್ಲಿ ಇಂತಹ ನಿರ್ಲಕ್ಷ್ಯ ಹೇಗೆ ಸಂಭವಿಸುತ್ತದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ವೀಡಿಯೊ ವೈರಲ್ ಆದ ನಂತರ ಬ್ಲಿಂಕಿಟ್ ಕ್ಷಮೆಯಾಚಿಸಿ ದೀಪಾ ಅವರ ಹಣವನ್ನು ಹಿಂದಿರುಗಿಸಿದೆ. ಈ ಬಗ್ಗೆ ವಿಷಯವನ್ನು ಪರಿಶೀಲಿಸುವುದಾಗಿ ಸಂಸ್ಥೆಯು ಭರವಸೆ ನೀಡಿದೆ ಎನ್ನಲಾಗಿದೆ.
ಆಹಾರ ಇಲಾಖೆಯ ತಂಡವು ದೀಪಾ ಅವರ ವೀಡಿಯೊವನ್ನು ಗಮನಿಸಿ ಅದರ ತನಿಖೆಯ ಭಾಗವಾಗಿ ವಿಚಾರಣೆಗಾಗಿ ಅವರ ಮನೆಗೆ ತೆರಳಿ ಮಾಹಿತಿ ಪಡೆದುಕೊಂಡಿದೆ. ನಂತರ ಆಹಾರ ಇಲಾಖೆ ಅಧಿಕಾರಿಗಳು ಸೆಕ್ಟರ್-22ರ ಬ್ಲಿಂಕಿಟ್ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಐಸ್ಕ್ರೀಂಗಳನ್ನು ಇಟ್ಟಿರುವ ಸ್ಥಳವನ್ನು ಅಧಿಕಾರಿಗಳು ಪರಿಶೀಲನೆ ನಡೆಸಿ ಅವುಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಬ್ಲಿಂಕಿಟ್ ಮಳಿಗೆಯಲ್ಲಿ ಸಾಕಷ್ಟು ದೂಳು ಕಂಡು ಬಂದಿದ್ದು, ನೈರ್ಮಲ್ಯದ ಬಗ್ಗೆ ಆತಂಕ ಮೂಡಿಸಿದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)