

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಇಡಿ ಆರೋಪಿಯನ್ನಾಗಿ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿರುವ ವಿಡಿಯೋವನ್ನು ತೆಗೆದುಹಾಕುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿಸಿದ ನಂತರ ಮಾರ್ಚ್ 28ರಂದು ಅರವಿಂದ್ ಕೇಜ್ರಿವಾಲ್ ಅವರನ್ನು ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಸಿಎಂ ಕೇಜ್ರಿವಾಲ್ ಅವರು ನ್ಯಾಯಾಲಯದ ಒಳಗೆ ನ್ಯಾಯಾಧೀಶರ ಮುಂದೆ ತಮ್ಮ ವಾದವನ್ನು ಮಂಡಿಸಿದ್ದಾರೆ. ವಾದ ಮಂಡಿಸಿರುವುದನ್ನು ರೆಕಾರ್ಡ್ ಮಾಡಲಾಗಿದ್ದು ಆ ವಿಡಿಯೋವನ್ನು ವಿಚಾರಣೆ ದಿನದಂದೇ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ಸುನೀತಾ ಕೇಜ್ರಿವಾಲ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮಾರ್ಚ್ 28ರಂದು ದೆಹಲಿಯ ರೋಸ್ ಅವೆನ್ಯೂ ಕೋರ್ಟ್‌ಗೆ ಕೇಜ್ರಿವಾಲ್ ಅವರನ್ನು ಹಾಜರುಪಡಿಸಿದಾಗ ನ್ಯಾಯಾಲಯದ ವಿಡಿಯೋ ಕಾನ್ಫರೆನ್ಸಿಂಗ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಮ ಕೋರಿ ವಕೀಲ ವೈಭವ್ ಸಿಂಗ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹಾಗೂ ಇದನ್ನು ದೆಹಲಿ ಹೈಕೋರ್ಟ್‌ನ 2021ರ ನ್ಯಾಯಾಲಯದ ನಿಯಮಗಳಿಗಾಗಿ ವಿಡಿಯೋ ಕಾನ್ಫರೆನ್ಸಿಂಗ್ ಅಡಿಯಲ್ಲಿ ನಿಷೇಧಿಸಲಾಗಿದೆ ಎಂದು ಉಲ್ಲೇಖಿಸಿದ್ದರು.
ಈ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ನೀನಾ ಬನ್ಸಾಲ್ ಕೃಷ್ಣ ಮತ್ತು ಅಮಿತ್ ಶರ್ಮಾ ಅವರ ಪೀಠವು ಸುನೀತಾ ಕೇಜ್ರಿವಾಲ್ ಮತ್ತು ಇತರರಿಗೆ ನೋಟಿಸ್ ಕಳುಹಿಸಿದ್ದು, ಸಾಮಾಜಿಕ ಮಾಧ್ಯಮದಿಂದ ವಿಡಿಯೋವನ್ನು ತೆಗೆದುಹಾಕುವಂತೆ ಸೂಚಿಸಿದೆ. ಈ ವಿಡಿಯೋಗಳನ್ನು ಮರು ಪೋಸ್ಟ್ ಮಾಡಿದವರನ್ನು ಡಿಲೀಟ್ ಮಾಡುವಂತೆ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಹೈಕೋರ್ಟ್ ಆದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಜುಲೈ 9ರಂದು ನಡೆಯಲಿದೆ. (ಏಜೆನ್ಸೀಸ್)