

ಚಿಕ್ಕಮಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಂಪುಟದಲ್ಲಿ ಗೃಹಸಚಿವರಾಗಿ ಇಂದು ಖಾತೆಯನ್ನು ವಹಿಸಿಕೊಂಡಿರುವ ಆರಗ ಜ್ಞಾನೇಂದ್ರ ಅವರು, ಇದು ನರೇಂದ್ರ ಮೋದಿಯವರ ಜಮಾನ ಎಂದು ಗುಡುಗಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಈ ಅನಿಸಿಕೆ ಹೇಳಿಕೊಂಡಿದ್ದಾರೆ. ಮಾತ್ರವಲ್ಲ, ಖಾತೆ ಹಂಚಿಕೆ ಕುರಿತ ಅಸಮಾಧಾನದ ಕುರಿತು ಕೂಡ ಪ್ರತಿಕ್ರಿಯಿಸಿದ್ದಾರೆ. ಎಲ್ಲರ ಆಪೇಕ್ಷೆಯಂತೆ ಖಾತೆ ಹಂಚಲು ಸಾಧ್ಯವಿಲ್ಲ. ಇದರ ಬಗ್ಗೆ ಮುಖ್ಯಮಂತ್ರಿಯವರು ಗಮನಕೊಟ್ಟು, ಸಮಸ್ಯೆ ಬಗೆಹರಿಸುತ್ತಾರೆ ಎಂದು ಸಮಜಾಯಿಷಿ ನೀಡಿದ್ದಾರೆ.
ಇನ್ನು ರಾಜ್ಯದಲ್ಲಿನ ಉಗ್ರ ಚಟುವಟಿಕೆ ಹಿನ್ನೆಲೆಯಲ್ಲಿ ಎನ್ಐಎ ದಾಳಿ ಕುರಿತು ಪ್ರತಿಕ್ರಿಯಿಸಿರುವ ಅವರು, ಸೆಟಲೈಟ್ ಕಾಲ್ ಎಲ್ಲಿಂದ ಬಂದರೂ ಎನ್ಐಎ ತಂಡದವರು ಬಂದು ಪ್ರಕರಣವನ್ನು ಭೇದಿಸುತ್ತಾರೆ. ಮೊದಲು ಈ ರೀತಿ ಆಗುತ್ತಿರಲಿಲ್ಲ, ಈಗ ಎಲ್ಲ ಬದಲಾಗಿದೆ. ಎಲ್ಲ ತಂತ್ರ ಮುಗಿಸುವಂಥ ಕಾರ್ಯ ಆಗುತ್ತದೆ. ಪೊಲೀಸರನ್ನು ಇನ್ನಷ್ಟು ಅಲರ್ಟ್ ಮಾಡುತ್ತೇವೆ. ಯಾವುದೇ ವಿಧ್ವಂಸಕ ಕೃತ್ಯ ನಡೆಯಲು ಬಿಡುವುದಿಲ್ಲ ಎಂಬ ಅಭಯವನ್ನೂ ನೀಡಿದ್ದಾರೆ.
ಭಟ್ಕಳ ಪ್ರಕರಣ ಸರ್ಕಾರಕ್ಕೆ ಗೊತ್ತಾಗಿದೆ. ಸರ್ಕಾರ ಯಾರನ್ನೂ ಬಿಡುವುದಿಲ್ಲ. ಎಲ್ಲಿಂದಲೋ ಬಂದು ನಮ್ಮ ನಡುವೆಯೇ ಇದ್ದು ಬಾಂಬ್ ಹಾಕುವ ಕಾಲ ಮುಗಿದಿದೆ. ಇದು ನರೇಂದ್ರ ಮೋದಿಯವರ ಜಮಾನ, ಪೊಲೀಸರು ಪ್ರಕರಣವನ್ನು ಅಂತಿಮ ಹಂತಕ್ಕೆ ತೆಗೆದುಕೊಂಡು ಹೋಗಿ ಮುಟ್ಟಿಸುತ್ತಾರೆ ಎಂದು ನೂತನ ಗೃಹಸಚಿವರು ತಿಳಿಸಿದ್ದಾರೆ.