ಹೊಸ ದೃಶ್ಯ ಶುರು: ರವಿಚಂದ್ರನ್ ಜತೆ ಅನಂತನಾಗ್..

Drishyam
Published on

ಬೆಂಗಳೂರು: ಈ ವರ್ಷದ ಆರಂಭದಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಿ ಇಡೀ ದೇಶದ ಗಮನ ಸೆಳೆದ ಚಿತ್ರವೆಂದರೆ ಅದು ಮೋಹನ್ ಲಾಲ್ ಅಭಿನಯದ ಮಲಯಾಳಂ ಚಿತ್ರ ‘ದೃಶ್ಯಂ 2’. ಈ ಚಿತ್ರ ಈಗಾಗಲೇ ತೆಲುಗಿನಲ್ಲಿ ಸದ್ದಿಲ್ಲದೆ ರಿಮೇಕ್ ಆಗಿದೆ. ತಮಿಳು ಮತ್ತು ಹಿಂದಿಯಲ್ಲಿ ಚಿತ್ರ ಮಾಡುವ ಮಾತಾಗುತ್ತಿದೆ. ಈ ಮಧ್ಯೆ, ಕನ್ನಡದಲ್ಲಿ ಸದ್ದಿಲ್ಲದೆ ಚಿತ್ರ ಶುರುವಾಗಿದೆ. ‘ದೃಶ್ಯ 2’ ಚಿತ್ರದ ಮುಹೂರ್ತ ಸೋಮವಾರ ಸರಳವಾಗಿ ನಡೆದಿದ್ದು, ಚಿತ್ರೀಕರಣ ಸಹ ಪ್ರಾರಂಭವಾಗಿದೆ. ಈಗಾಗಲೇ ‘ದೃಶ್ಯ’ದಲ್ಲಿ ರಾಜೇಂದ್ರ ಪೊನ್ನಪ್ಪ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರವಿಚಂದ್ರನ್, ಈ ಚಿತ್ರದಲ್ಲೂ ಆ ಪಾತ್ರವನ್ನು ಮುಂದುವರೆಸುತ್ತಿದ್ದಾರೆ.

ಇನ್ನು, ಆ ಚಿತ್ರವನ್ನು ನಿರ್ದೇಶಿಸಿದ್ದ ಹಿರಿಯ ನಿರ್ದೇಶಕ ಪಿ. ವಾಸು, ಇಲ್ಲೂ ಆಕ್ಷನ್-ಕಟ್ ಹೇಳಲಿದ್ದಾರೆ. ವಿಶೇಷವೆಂದರೆ, ಹಿರಿಯ ನಟ ಅನಂತ್ ನಾಗ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ, ಚಿತ್ರತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ದೃಶ್ಯ’ ಚಿತ್ರದಲ್ಲಿ ರವಿಚಂದ್ರನ್ ಅವರ ಪತ್ನಿ ಮತ್ತು ಪುತ್ರಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನವ್ಯ ನಾಯರ್ ಮತ್ತು ಆರೋಹಿ ನಾರಾಯಣ್ ಇಲ್ಲೂ ಮುಂದುವರಿದಿದ್ದಾರೆ. ಮಿಕ್ಕಂತೆ ಶಿವಾಜಿ ಪ್ರಭು, ಪ್ರಮೋದ್ ಶೆಟ್ಟಿ ನಟಿಸುತ್ತಿದ್ದಾರೆ. ಜಿ.ಎಸ್.ವಿ ಸೀತಾರಾಂ ಛಾಯಾಗ್ರಹಣವಿರುವ ಈ ಚಿತ್ರವನ್ನು ಸಿ.ವಿ. ಸಾರಥಿ ನಿರ್ವಿುಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net