

ಲಂಡನ್: ರೂಪಾಂತರಗೊಂಡ ಕರೊನಾ ವೈರಸ್ ಕಾಟಕ್ಕೆ ಬ್ರಿಟನ್ ವಾಸಿಗಳು ಕಂಗಾಲಾಗಿದ್ದು, ಅಲ್ಲಿದ್ದ ವಿದೇಶಿ ಪ್ರಜೆಗಳು ನಿನ್ನೆ ತಮ್ಮ ಊರಿಗೆ ಮರಳುವುದಕ್ಕಾಗಿ ಹೀತ್ರೂ ವಿಮಾನ ನಿಲ್ದಾಣಕ್ಕೆ ಆಗಮಿಸಿ ಸಂಕಷ್ಟಕ್ಕೀಡಾದ ದೃಶ್ಯವೀಗ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ರೂಪಾಂತರಗೊಂಡ ವೈರಸ್ ಶೇಕಡ 70 ರಷ್ಟು ಹೆಚ್ಚು ಸೋಂಕುಕಾರಕವಾಗಿದ್ದು, ಆತಂಕವನ್ನು ಸೃಷ್ಟಿಸಿದೆ. ಹೀಗಾಗಿ, ಬ್ರಿಟನ್ ಜತೆಗೆ ಸುತ್ತಮುತ್ತಲಿನ ವಿವಿಧ ರಾಷ್ಟ್ರಗಳು ಸಂಪರ್ಕ ಕಡಿದುಕೊಂಡಿವೆ.
ಡಬ್ಲಿನ್, ಐರ್ಲೆಂಡ್ಗೆ ತೆರಳಲು ಆಗಮಿಸಿದ್ದ ನೂರಾರು ಪ್ರಯಾಣಿಕರು ವಿಮಾನ ಸಿಗದೆ ಪರದಾಡಿದ ಪ್ರಸಂಗ ನಿನ್ನೆ ನಡೆದಿತ್ತು. ಫ್ರಾನ್ಸ್, ಜರ್ಮನಿ, ಇಸ್ರೇಲ್, ಎಲ್ ಸಾಲ್ವಡೋರ್, ಬಲ್ಗೇರಿಯಾ, ನೆದರ್ಲೆಂಡ್ಸ್, ಇಟಲಿ, ಫಿನ್ಲೆಂಡ್, ಡೆನ್ಮಾರ್ಕ್, ಟರ್ಕಿ, ಮೊರಾಕ್ಕೊ, ಕೆನಡಾ, ಬೆಲ್ಜಿಯಂ, ಆಸ್ಟ್ರಿಯ, ಸೌದಿ ಅರೇಬಿಯಾ, ಕುವೈತ್, ಐರ್ಲೆಂಡ್ ದೇಶಗಳು ಬ್ರಿಟನ್ ಜತೆಗಿನ ವಾಯುಯಾನ ಸೇವೆಯನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಿವೆ.
ಫ್ರಾನ್ಸ್ ತನ್ನ ಗಡಿಯನ್ನು ಮುಚ್ಚಿದ್ದು, ಬ್ರಿಟನ್ನಿಂದ ಬಂದ ಲಾರಿ, ಟ್ರಕ್ಗಳನ್ನು ಗಡಿಯಲ್ಲಿ 48 ಗಂಟೆ ಕಾಲ ನಿಲ್ಲಿಸಿ, ತಪಾಸಣೆಗೊಳಪಡಿಸಿದ ನಂತರವೇ ಪ್ರವೇಶಕ್ಕೆ ಅನುಮತಿ ನೀಡುತ್ತಿದೆ. ಬ್ರಿಟನ್ ಸರ್ಕಾರ ಸೋಮವಾರ ತುರ್ತು ಸಭೆ ನಡೆಸಿದ್ದು, ಪರಿಸ್ಥಿತಿ ಅವಲೋಕನ ಮಾಡುತ್ತ ಸೋಂಕು ಹರಡುವುದನ್ನು ತಡೆಯಲು ಕಠಿಣ ಕ್ರಮಗಳನ್ನು ಜಾರಿಗೊಳಿಸತೊಡಗಿದೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..