

ಮುಂಬೈ: ಊರ್ಮಿಳಾ ಮಾತೋಂಡ್ಕರ್ ಒಬ್ಬ ಸಾಫ್ಟ್ ಪೋರ್ನ್ ನಟಿ ...
ಹಾಗಂತ ಹೇಳುವ ಮೂಲಕ ಬಾಲಿವುಡ್ ನಟಿ ಕಂಗನಾ ರಣಾವತ್ ಹೊಸ ವಿವಾದ ಹುಟ್ಟುಹಾಕಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುವ ಸಂದರ್ಭದಲ್ಲಿ, 'ಒಬ್ಬ ಸಾಫ್ಟ್ ಪೋರ್ನ್ ನಟಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ರಾಜಕೀಯ ಪಕ್ಷವೊಂದರಿಂದ ಟಿಕೆಟ್ ಸಿಗುತ್ತದೆ ಎಂದರೆ, ನನಗೆ ಖಂಡಿತಾ ಕಷ್ಟವಲ್ಲ' ಎಂದು ಅವರು ಹೇಳಿದ್ದರು.
ಕಂಗನಾ ಯಾರ ಹೆಸರನ್ನು ಹೇಳದಿದ್ದರೂ, ಅವರ ಗುರಿ ಊರ್ಮಿಳಾ ಮಾತೋಂಡ್ಕರ್ ಎಂಬುದು ಎಲ್ಲರಿಗೂ ಸ್ಪಷ್ಟವಾಗಿತ್ತು. ಅದಕ್ಕೆ ಕಾರಣ, ಅದೇ ದಿನ ಬೆಳಿಗ್ಗೆ ಕಂಗನಾ ಬಗ್ಗೆ ಊರ್ಮಿಳಾ ಹರಿಹಾಯ್ದಿದ್ದರು. 'ಒಬ್ಬರು ಯಾವಾಗಲೂ ಜೋರಾಗಿ ಮಾತನಾಡುತ್ತಾರೆ ಎಂದರೆ, ಅವರು ಯಾವಾಗಲೂ ನಿಜ ಹೇಳುತ್ತಿದ್ದಾರೆ ಎಂದರ್ಥವಲ್ಲ. ಕೆಲವರಿಗೆ ಕೊರಗುವುದು ಅಭ್ಯಾಸವಾಗಿದೆ. ಹಾಗಾಗಿ ಒಂದಲ್ಲಾ ಒಂದು ಕಾರಣಕ್ಕೆ ಮಾತನಾಡುತ್ತಲೇ ಇರುತ್ತಾರೆ' ಎಂದು ಹೇಳಿದ್ದರು.
ಇದನ್ನೂ ಓದಿ: ಮುಂದಿನ ಹಂತದ ಚಿತ್ರೀಕರಣದ ಸಿದ್ಧತೆಯಲ್ಲಿ ಟೀಮ್ ಚಾರ್ಲಿ
ಇದಕ್ಕೆ ಪ್ರತಿಯಾಗಿ ಮಾತನಾಡಿದ ಕಂಗನಾ, ಊರ್ಮಿಳಾ ಅವರನ್ನು ಸಾಫ್ಟ್ ಪೋರ್ನ್ ನಟಿ ಎಂದು ಹೀಯಾಳಿಸಿ ಹೊಸ ವಿವಾದ ಹುಟ್ಟುಹಾಕಿದ್ದರು. ಈ ಬಗ್ಗೆ ಇದೀಗ ಸಿಕ್ಕಾಪಟ್ಟೆ ಚರ್ಚೆಗಳು ನಡೆಯುತ್ತಿದ್ದು, ಗ್ಲಾಮರಸ್ ಪಾತ್ರಗಳನ್ನು ಮಾಡುವವರೆಲ್ಲಾ ಸಾಫ್ಟ್ ಪೋರ್ನ್ ನಟಿಯರಾದರೆ, ಅಂತಹ ಪಾತ್ರಗಳಲ್ಲೂ ಕಾಣಿಸಿಕೊಂಡಿರುವ ಕಂಗನಾ ಅವರನ್ನು ಏನೆಂದು ಕರೆಯಬೇಕು ಎಂಬ ಚರ್ಚೆ ಸೋಷಿಯಲ್ ಮೀಡಿಯಾಗಳಲ್ಲಿ ನಡೆಯುತ್ತಿದೆ.
ಊರ್ಮಿಳಾ ತಮ್ಮ ವೃತ್ತಿಜೀವನದಲ್ಲಿ ಎಲ್ಲಾ ತರಹದ ಪಾತ್ರಗಳನ್ನೂ ಮಾಡಿದ್ದಾರೆ. 'ರಂಗೀಲಾ'ದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡರೆ, 'ಸತ್ಯ'ದಲ್ಲಿ ಪಕ್ಕದ್ಮನೆ ಹುಡುಗಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಇದಲ್ಲದೆ 'ಏಕ್ ಹಸೀನಾ ತೀ' 'ಭೂತ್' ಸೇರಿದಂತೆ ಹಲವು ಚಿತ್ರಗಳಲ್ಲಿ ತಮ್ಮ ಅಭಿನಯದಿಂದ ಗಮನಸೆಳೆದಿದ್ದಾರೆ. ಆದರೆ, ಅವರ ಬಗ್ಗೆ ಕಂಗನಾ ಮಾತನಾಡಿರುವುದು ಇದೀಗ ಚರ್ಚಾಸ್ಪದ ವಿಷಯವಾಗಿದೆ.
ಏಕೆಂದರೆ. ಕಂಗನಾ ಸಹ ಅಂತಹ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 'ಕ್ವೀನ್', 'ತನು ವೆಡ್ಸ್ ಮನು 2' ಚಿತ್ರಗಳಲ್ಲಿ ತಮ್ಮ ಅಭಿನಯದಿಂದ ಹೇಗೆ ಅವರು ದೊಡ್ಡ ಹೆಸರು ಮಾಡಿದರೋ, ಅದೇ ರೀತಿ ಹಲವು ಚಿತ್ರಗಳಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದರ ಜತೆಗೆ, ಐಟಂ ಸಾಂಗ್ಗಳಲ್ಲೂ ಕಂಗನಾ ಮಿಂಚಿದ್ದಾರೆ. 'ಶಕಲಕ ಬೂಮ್ ಬೂಮ್', 'ರಾಜ್ - ದಿ ಮಿಸ್ಟ್ರಿ ಕಂಟಿನ್ಯೂಸ್', 'ರಜ್ಜೋ', 'ರಿವಾಲ್ವರ್ ರಾಣಿ', 'ಕಟ್ಟಿ ಬಟ್ಟಿ' ಮುಂತಾದ ಚಿತ್ರಗಳಲ್ಲಿ ಕಂಗನಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು, ಅವರನ್ನೂ ಸಾಫ್ಟ್ ಪೋರ್ನ್ ನಟಿ ಎಂದು ಕರೆದರೆ ಹೇಗೆ ಎಂಬ ಪ್ರಶ್ನೆ ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ.
ಈ ಬಗ್ಗೆ ಕಂಗನಾ ಏನೆಂದು ಪ್ರತಿಕ್ರಿಯಿಸುತ್ತಾರೋ ಎಂಬ ಕುತೂಹಲ ಎಲ್ಲರಿಗೂ ಇದೆ.