ಮುಂಬೈ Vs ಬೆಂಗಳೂರು: ಕಿಕ್ಕಿರಿದ ನಮ್ಮ ಮೆಟ್ರೋ ರೈಲನ್ನು ಟೀಕಿಸಿದ ನೆಟ್ಟಿಗರು!

Untitled design - 2023-10-27T203130.800
Published on

ಬೆಂಗಳೂರು: ಇತ್ತೀಚೆಗೆ ನೇರಳೆ ಬಣ್ಣದ ನಮ್ಮ ಮೆಟ್ರೋ ರೈಲಿನಲ್ಲಿ ವಿಪರೀತ ರಶ್ ತೋರಿಸುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು ನಮ್ಮ ಮೆಟ್ರೋ ರೈಲನ್ನು ಮುಂಬೈ ಲೋಕಲ್​ ಟ್ರೈನ್​ಗೆ ಹೋಲಿಸಿ ಟೀಕಿಸಿದ್ದಾರೆ.

ಇತ್ತೀಚೆಗಷ್ಟೇ ನಮ್ಮ ಮೆಟ್ರೋದ ನೇರಳೆ ಬಣ್ಣ ಮಾರ್ಗವಾದ ಚಲ್ಲಘಟ್ಟ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ಸಂಪರ್ಕಿಸುವ ರೈಲಿಗೆ ಚಾಲನೆ ನೀಡಲಾಯಿತು. ಇದರ ಬೆನ್ನಲ್ಲೇ ಪ್ರಯಾಣ ಆರಂಭಿಸಿದ ರೈಲುಗಳ ಬೋಗಿಗಳಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿರುವುದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಹಿಳೆಯರ ಕೋಚ್​ನಲ್ಲಿ ಕಂಡುಬಂದ ರಶ್​ ನೋಡಿದ ನೆಟ್ಟಿಗರು ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಲೇವಡಿ ಮಾಡಿದ್ದಾರೆ.

ಮಹಿಳಾ ಪ್ರಯಾಣಿಕರಿಂದ ಕಿಕ್ಕಿರಿದ ದೃಶ್ಯಗಳನ್ನು ವೀಕ್ಷಿಸಿದ ನೆಟ್ಟಿಗರು, ಮುಂಬೈ ಲೋಕಲ್​ ರೈಲನ್ನು ನೆನಪಿಸಿಕೊಂಡಿದ್ದಾರೆ. ಈ ರೈಲುಗಳಲ್ಲಿ ಕಂಡುಬರುವ ಜನದಟ್ಟಣೆಯನ್ನು ನಮ್ಮ ಮೆಟ್ರೋ ರೈಲಿಗೆ ಹೋಲಿಸಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ ನಂತರ ಕೆಲವರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್​ ಮೂಲಕ ವ್ಯಕ್ತಪಡಿಸಿದ್ದಾರೆ.

ಚಲ್ಲಘಟ್ಟ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ಸಂಪರ್ಕಿಸುವ ಪರ್ಪಲ್ ಲೈನ್ ಮಾರ್ಗದಿಂದ ಬೆಂಗಳೂರು ಮೆಟ್ರೋದ ಜನದಟ್ಟಣೆಯ ದೃಶ್ಯಕ್ಕೆ ಸ್ಪಂದಿಸಿದ ಎಕ್ಸ್ ಬಳಕೆದಾರರೊಬ್ಬರು "ಈ ಹಿಂದೆ ಬೆಂಗಳೂರಿನವರು ಮುಂಬೈ ಲೋಕಲ್​ ಟ್ರೈನ್​​ನಲ್ಲಿ ಪ್ರಯಾಣಿಸುವವರನ್ನು ನೋಡಿ ನಗುತ್ತಿದ್ದರು" ಎಂದು ಕಮೆಂಟ್​ ಹಾಕಿದ್ದಾರೆ. ಇದಕ್ಕೆ ಮತ್ತೊಬ್ಬರು, "ಇದು ಬೆಂಗಳೂರಿನ ಸ್ಪಿರಿಟ್" ಎಂದು ಹೇಳುವ ಮೂಲಕ ಲೇವಡಿ ಮಾಡಿದ್ದಾರೆ.

ಮೆಟ್ರೊ ರೈಲಿನಲ್ಲಿ ಮಹಿಳಾ ಕೋಚ್ ಭಾರಿ ಜನದಟ್ಟಣೆಗೆ ಸಾಕ್ಷಿಯಾಗುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಮಹಿಳೆಯರು ರೈಲಿನ ಫುಟ್‌ಬೋರ್ಡ್​ನಲ್ಲಿ ನಿಂತುಕೊಂಡಿದ್ದು, ಕೆಲವರು ಒಳಗೆ ಹೋಗಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net