

ಬೆಂಗಳೂರು: ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಪುನರ್ ನಾಮಕರಣ ಮಾಡಿ ನ.1ಕ್ಕೆ 50 ವರ್ಷಗಳು ತುಂಬಲಿವೆ. ಈ ನಿಮಿತ್ತ ವರ್ಷಪೂರ್ತಿ ಸುವರ್ಣ ಸಂಭ್ರಮೋತ್ಸವಕ್ಕೆ ಸರ್ಕಾರ ಸಜ್ಜಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಮಾಹಿತಿ ನೀಡಿದರು.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ಕಂದಾಯ ವಿಭಾಗಗಳಲ್ಲಿ ಸಭೆ, ವಿವಿಧ ಕ್ಷೇತ್ರಗಳ ಗಣ್ಯರಿಂದ ಅಭಿಪ್ರಾಯ ಸಂಗ್ರಹ, 1250 ಸಲಹೆಗಳ ಸ್ವೀಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಚರ್ಚಿಸಿದ ನಂತರ ಕಾರ್ಯಚಟುವಟಿಕೆ ನೀಲಿನಕ್ಷೆ ಅಂತಿಮಗೊಳಿಸಲಾಗಿದೆ.
ಡಿ.ದೇವರಾಜ ಅರಸು ಸಿಎಂ ಆಗಿದ್ದ ಸಂದರ್ಭದಲ್ಲಿ ‘ಕರ್ನಾಟಕ’ ಎಂದು ಪುನರ್ ನಾಮಕರಣ ಮಾಡಿದರು. ಈ ಸಂದರ್ಭದಲ್ಲಿ ಅವರು ಹಂಪಿಯಿಂದ ಆರಂಭಿಸಿ ಗದಗವರೆಗೆ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದೇ ರೀತಿ ಪುನರಾವರ್ತನೆಯಾದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ ಎಂದರು.
ನಾಡಿನ ಜನ-ಮನ ತಲುಪಿ ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವ ಸುವರ್ಣ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲು ಡಿಸಿ, ಜಿ.ಪಂ. ಸಿಇಒಗಳ ಮುಖೇನ ಆದೇಶ ಹೊರಡಿಸಲಾಗಿದೆ.
ಬೆಂಗಳೂರಿನ ಐಟಿ-ಬಿಟಿ ಕಂಪನಿಗಳು, ವಸತಿ ಸಮುಚ್ಚಯಗಳ ಸಂಘಗಳೊಂದಿಗೆ ಸಮಾಲೋಚಿಸಿ ಸುವರ್ಣ ಸಂಭ್ರಮದ ಮಹತ್ವ ತಿಳಿಸಿದ್ದು, ಬಹುತೇಕ ಕಂಪನಿ, ಸಂಘ-ಸಂಸ್ಥೆಗಳು ಅರ್ಥಪೂರ್ಣ ಆಚರಣೆಗೆ ಉತ್ಸಾಹ ವ್ಯಕ್ತಪಡಿಸಿವೆ ಎಂದರು.
ನ.1ರಂದು ಹಳ್ಳಿಯಿಂದ ರಾಜಧಾನಿವರೆಗೆ ರಾಷ್ಟ್ರ ಧ್ವಜಾರೋಹಣ, ರಾಷ್ಟ್ರ ಮತ್ತು ನಾಡಗೀತೆ ಜತೆಗೆ ಕುವೆಂಪು, ಹುಯಿಲುಗೋಳ ನಾರಾಯಣ, ದ.ರಾ.ಬೇಂದ್ರೆ, ಸಿದ್ದಯ್ಯಪುರಾಣಿಕ್ ಮತ್ತು ಚನ್ನವೀರ ಕಣವಿ ರಚಿತ ಗೀತೆಗಳ ಗಾಯನ ನಡೆಯಲಿದೆ.
ನಾಡಿನ ಎಲ್ಲರ ಮನೆ ಮುಂದೆ ರಂಗೋಲಿ, ಕನ್ನಡಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಮತ್ತು ಆಯಾ ಊರಿನ ಮೈದಾನದಲ್ಲಿ ಕೆಂಪು, ಹಳದಿ ಬಣ್ಣ ಬಾವುಟ ಹಾರಿಸಲು ಜನರಿಗೆ ಮನವಿ ಮಾಡಿಕೊಳ್ಳಲಾಗಿದೆ.
ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಎಲ್ಲ ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಲಾಗುವುದು. ವರ್ಷಪೂರ್ತಿ ರಥಯಾತ್ರೆ ನಡೆಯಲಿದೆ. ಆಯಾ ಜಿಲ್ಲಾ ಕೇಂದ್ರಕ್ಕೆ ರಥ ತಲುಪಿದಾಗ ಜಿಲ್ಲೆಯಾದ್ಯಂತ ಸುವರ್ಣ ಮಹೋತ್ಸವವನ್ನು ಸಡಗರದಿಂದ ಆಚರಿಸಲು ತಿಳಿಸಲಾಗಿದೆ ಎಂದು ಶಿವರಾಜ್ ತಂಗಡಗಿ ವಿವರಿಸಿದರು.
ಹಂಪಿಯ ಎದುರು ಬಸವಣ್ಣ ವೇದಿಕೆ ಮುಂಬದಿ ರಥಯಾತ್ರೆಗೆ ನ.2ರ ಸಂಜೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಅದಕ್ಕೂ ಮುನ್ನ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಗಂಗಾ ಜಲಾಭಿಷೇಕ, ಭುವನೇಶ್ವರಿ ದೇವಿಗೆ ಪಂಚಾಮೃತ ಅಭಿಷೇಕ, ರಥಬೀದಿಯಲ್ಲಿ ಜಾನಪದ ಕಲಾತಂಡಗಳ ಮೆರವಣಿಗೆ ನಡೆಯಲಿದ್ದು, ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿಯಾಗಲಿದೆ.
ಅಂಚೆ ಇಲಾಖೆಯಿಂದ ವಿಶೇಷ ಅಂಚೆ ಚೀಟಿ ಬಿಡುಗಡೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕೆಎಂಎ್ನವರು ‘ಕರ್ನಾಟಕ ಪಾಕ’ ಹೊಸ ಸಿಹಿ ತಿನಿಸು ಬಿಡುಗಡೆ ಮಾಡಲಿದ್ದಾರೆ. ನಾಡು ನುಡಿ, ಪರಂಪರೆ, ಕಲೆ, ಸಂಸ್ಕೃತಿ, ವೈವಿಧ್ಯತೆಗಳು ವರ್ಷದುದ್ದಕ್ಕೂ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಅನಾವರಣಗೊಳ್ಳಲಿದೆ ಎಂದು ತಿಳಿಸಿದರು.