

ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಜಾವಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರ ಅವರು ಸ್ಪರ್ಧೆಗಳ ಸಂದರ್ಭದಲ್ಲಿ ನಡೆದ ವಿಚಿತ್ರ ಪ್ರಸಂಗವೊಂದನ್ನು ಬಿಚ್ಚಿಟ್ಟಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಅಂತಿಮ ಸ್ಪರ್ಧೆಗಳ ಮುಂಚೆ ತಮ್ಮ ಜಾವೆಲಿನ್ ಕಾಣೆಯಾಗಿದ್ದ ಬಗ್ಗೆ ಹೇಳಿದ್ದಾರೆ.
"ನಾನದಕ್ಕಾಗಿ ಹುಡುಕಾಡುತ್ತಿದ್ದೆ. ಸಡನ್ನಾಗಿ, ಪಾಕಿಸ್ತಾನದ ಅರ್ಷದ್ ನದೀಂ ಅದನ್ನು ಹಿಡಿದುಕೊಂಡು ಓಡಾಡುತ್ತಿರುವುದನ್ನು ನೋಡಿದೆ. ಭಾಯಿ... ಅದನ್ನು ನನಗೆ ಕೊಡಪ್ಪ, ಅದು ನಂದು! ನಾನೀಗ ಅದನ್ನು ಎಸೆಯಬೇಕು ಎಂದೆ. ಆತ ಅದನ್ನು ನನಗೆ ಹಿಂತಿರುಗಿಸಿದ" ಎಂದು ನೀರಜ್ ಚೋಪ್ರ ಹೇಳಿದ್ದಾಗಿ ವರದಿ ಹೇಳಿದೆ.
"ಇದರಿಂದಾಗಿಯೇ ನಾನು ಮೊದಲ ಎಸೆತವನ್ನು ಗಡಿಬಿಡಿಯಿಂದ ಮಾಡಿದ್ದನ್ನು ನೀವು ನೋಡಿರಬಹುದು" ಎಂದು ಚೋಪ್ರ ಹೇಳಿದ್ದಾರೆ. ಜೊತೆಗೇ ಪಾಕಿಸ್ತಾನದ ನದೀಮ್ ಉತ್ತಮ ಆಟಗಾರಿಕೆ ಪ್ರದರ್ಶಿಸಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾವಲೆನ್ನಲ್ಲಿ ಉತ್ತಮ ಸ್ಥಾನ ಗಳಿಸಲು ಪಾಕಿಸ್ತಾನಕ್ಕೆ ಅವಕಾಶವಿದೆ ಎಂದಿದ್ದಾರೆ. (ಏಜೆನ್ಸೀಸ್)