ಬ್ರಸೆಲ್ಸ್: ಭಾರತದ ಅಥ್ಲೀಟ್, ಚಿನ್ನದ ಹುಡುಗ ಎಂದೇ ಖ್ಯಾತಿ ಪಡೆದಿರುವ ನೀರಜ್ ಚೋಪ್ರಾ ಶನಿವಾರ ಇಲ್ಲಿ ನಡೆದ ಡೈಮಂಡ್ ಲೀಗ್ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಎರಡನೇ ಸ್ಥಾನ ಗಳಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಗ್ರೆನೆಡಾದ ಪೀಟರ್ಸ್ ಆ್ಯಂಡರ್ಸನ್ಗೆ ನಿಕಟ ಪೈಪೋಟಿ ಒಡ್ಡಿದ ನೀರಜ್ಗೆ 0.01 ಮೀ ಅಂತರದಲ್ಲಿ ಸೋಲುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಆ್ಯಂಡರ್ಸನ್ ಅವರು ತಮ್ಮ ಮೊದಲ ಎಸೆತದಲ್ಲಿಯೇ 87.87 ಮೀಟರ್ ದೂರ ಎಸೆದರು. ನೀರಜ್ ತಮ್ಮ ಮೂರನೇ ಥ್ರೋನಲ್ಲಿ 87.86 ಮೀ ಎಸೆದರು. ನಂತರದ ಮೂರು ಎಸೆತಗಳಲ್ಲಿ ನೀರಜ್ ಕ್ರಮವಾಗಿ 82.04 ಮೀ, 83.30 ಮೀ ಹಾಗೂ 86.46 ಮೀ ದೂರ ಥ್ರೋ ಮಾಡಿದರು.
ಇದನ್ನೂ ಓದಿ: ಬಿಕಿನಿಯಲ್ಲಿ ಮಸ್ತ್ ಪೋಸ್ ಕೊಟ್ಟ ಪ್ರಿಯಾಂಕಾ ! ದೇಸಿ ಗರ್ಲ್ ಗ್ಲಾಮರ್ಗೆ ಫ್ಯಾನ್ಸ್ ಕ್ಲೀನ್ಬೌಲ್ಡ್
ಎರಡು ಬಾರಿ ವಿಶ್ವ ಚಾಂಪಿಯನ್ ಆಗಿರುವ ಗ್ರೆನಡಾದ ಪೀಟರ್ಸ್ ತನ್ನ ಆರಂಭಿಕ ಪ್ರಯತ್ನದಲ್ಲಿ ದಿನದ ಅತ್ಯುತ್ತಮ ಎಸೆತವನ್ನು ಸಾಧಿಸಿದರು. ಜರ್ಮನಿಯ ಜೂಲಿಯನ್ ವೆಬರ್ 85.97 ಮೀಟರ್ ಎಸೆದು ಮೂರನೇ ಸ್ಥಾನ ಗಳಿಸಿದರು. ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಚಿನ್ನ ಗೆದ್ದಿದ್ದ ನೀರಜ್ ಪ್ಯಾರಿಸ್‌ನಲ್ಲಿ ನಡೆದ 2024 ಒಲಿಂಪಿಕ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಈ ಮೂಲಕ ತಮ್ಮ ಸೀಸನ್ ಅನ್ನು ಉನ್ನತ ಮಟ್ಟದಲ್ಲಿ ಕೊನೆಗೊಳಿಸಿದರು.
ಡೈಮಂಡ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿರುವ ಪೀಟರ್ಸ್ ಡೈಮಂಡ್ ಲೀಗ್ ಟ್ರೋಫಿ ಮತ್ತು 30,000 ಡಾಲರ್ (25 ಲಕ್ಷ ರೂ) ನಗದು ಬಹುಮಾನವನ್ನು ಪಡೆಯಲಿದ್ದಾರೆ. ಇತ್ತ ಎರಡನೇ ಸ್ಥಾನ ಗಳಿಸಿರುವ ನೀರಜ್ 12,000 ಡಾಲರ್ (10 ಲಕ್ಷ ರೂ) ನಗದು ಬಹುಮಾನ ಪಡೆಯಲಿದ್ದಾರೆ.