

ಕುಂದಾಪುರ: ಬೈಂದೂರು ತಾಲೂಕಿನ ಮೂದೂರು, ಜಡ್ಕಲ್, ಬೆಳ್ಕಲ್ ಪರಿಸರದಲ್ಲಿ ಹಸಿರು ಬಣ್ಣದ ಸಮವಸ್ತ್ರ ಧರಿಸಿ ಶಸ್ತ್ರಸಜ್ಜಿತ ತಂಡ ಕೆಲವು ಮನೆಗಳಿಗೆ ಭೇಟಿ ನೀಡಿದ್ದು ನಕ್ಸಲರಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.
ತಣ್ಣಗಾಗಿದ್ದ ನಕ್ಸಲ್ ಚಟುವಟಿಕೆ ಮತ್ತೆ ಆರಂಭವಾಗಿದೆಯೇ ಎನ್ನುವ ಅನುಮಾನ ಬೈಂದೂರು ತಾಲೂಕಿನ ಜನತೆಯಲ್ಲಿ ಮನೆಮಾಡಿದೆ. ಎರಡು ತಿಂಗಳುಗಳಿಂದ ಈ ಪರಿಸರಗಳಲ್ಲಿ ನಕ್ಸಲ್ ಚಟುವಟಿಕೆ ನಡೆಯುತ್ತಿರುವ ಶಂಕೆಯಿದ್ದು, ನಾಲ್ವರನ್ನು ಒಳಗೊಂಡ ತಂಡ ಹಲವು ಮನೆಗಳಿಗೆ ಭೇಟಿ ನೀಡುತ್ತಿದೆ ಎಂದು ಹೇಳಲಾಗಿದೆ.
ನಾಲ್ವರ ಪೈಕಿ ಇಬ್ಬರಲ್ಲಿ ಶಸ್ತ್ರಾಸ್ತ್ರಗಳಿದ್ದವು. ಕೆಲವು ಮನೆಯವರು ಇವರಿಗೆ ಭೇಟಿ ಅವಕಾಶ ನೀಡಿಲ್ಲ. ಕೆಲವು ಮನೆಯವರ ಜತೆ ಕಿಟಕಿಯಿಂದಷ್ಟೇ ಮಾತಾಡಿ ತೆರಳಿದ್ದಾರೆ. ಎರಡು ದಿನಗಳ ಹಿಂದೆಯೂ ಈ ತಂಡ ಹಲವು ಮನೆಗಳಿಗೆ ಭೇಟಿ ನೀಡಿರುವ ಮಾಹಿತಿ ಬೆಳಕಿಗೆ ಬಂದಿದೆ. ಮೂರು ದಿನಗಳ ಹಿಂದೆ ಉದಯನಗರ ಬಳಿ ತಂಡದ ಚಲನವಲನ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.