More

    ನ್ಯಾಯಾಲಯವಾದ ಜಿಪಂ ಸಭಾಂಗಣ: ದೂರುದಾರರು, ಅಧಿಕಾರಿಗಳಿಂದಲೇ ವಕಾಲತು

    ವಿಜಯವಾಣಿ ಸುದ್ದಿಜಾಲ ಉಡುಪಿ
    ಯಾವಾಗಲೂ ಸರ್ಕಾರಿ ಕಾರ್ಯಕ್ರಮಗಳು ಅಥವಾ ಜಿಲ್ಲಾಮಟ್ಟದ ಅಧಿಕಾರಿಗಳು, ಸಚಿವರ ಸಭೆಗೆ ಸೀಮಿತವಾಗಿರುತ್ತಿದ್ದ ಉಡುಪಿ ಜಿಲ್ಲಾ ಪಂಚಾಯಿತಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣ ಸೋಮವಾರ ಬೆಳಗ್ಗೆ ಲೋಕಾಯುಕ್ತ ನ್ಯಾಯಾಲಯವಾಗಿ ಗಮನ ಸೆಳೆಯಿತು.

    ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ. ಎನ್. ಫಣೀಂದ್ರ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಅಹವಾಲು, ಕುಂದು-ಕೊರತೆಗಳ ದೂರು ವಿಚಾರಣೆ ಹಾಗೂ ಪ್ರಕರಣ ವಿಲೇವಾರಿ ವಿಚಾರವಾಗಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಯಿತು. ಆರಂಭದಲ್ಲಿ ನಡೆದ ಅನೇಕ ವ್ಯಾಜ್ಯಗಳ ವಿಚಾರಣೆಯಲ್ಲಿ ದೂರುದಾರರೇ ತಮ್ಮ ಪರ ಉಪಲೋಕಾಯುಕ್ತರ ಸಮ್ಮುಖದಲ್ಲಿ ವಕಾಲತು ನಡೆಸಿದರು.

    ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುವಾರಿ ಸ್ವಾಗತಿಸಿದರು. ಲೋಕಾಯುಕ್ತ ಮಂಗಳೂರು ವಿಭಾಗದ ಅಧೀಕ್ಷಕ ಸಿ.ಎ. ಸೈಮನ್, ಲೋಕಾಯುಕ್ತ ಉಪನಿಬಂಧಕ ರಂಗೇಗೌಡ ಅವರು ಪ್ರಕರಣಗಳ ವಿಚಾರಣೆಗೆ ಸಹಕರಿಸಿದರು. ಕರ್ನಾಟಕ ಲೋಕಾಯುಕ್ತದ ತೀರ್ಪು ಬರಹಗಾರ ಸುನೀಲ್‌ಕುಮಾರ್, ಪ್ರಕರಣಗಳ ವಿಚಾರಣೆಗೆ ಅವಕಾಶ ಮಾಡಿಕೊಟ್ಟರಲ್ಲದೆ ಉಪಲೋಕಾಯುಕ್ತರ ತೀರ್ಪುಗಳನ್ನು ದಾಖಲೀಕರಣ ಮಾಡಿದರು.

    ಆಸೆ ಇರಬೇಕು, ದುರಾಸೆ ಇರಬಾರದು

    ಸಾಮಾಜಿಕ ಜೀವನದಲ್ಲಿ ಇರುವ ನಾವೆಲ್ಲರೂ ಚೆನ್ನಾಗಿ ಇರಬೇಕು. ತನಗೆ ಅನುಕೂಲ ಆಗಬೇಕು ಎಂದು ಇನ್ನೊಬ್ಬರ ಮನೆ ಕೆಡವಲು ಪ್ರಯತ್ನಿಸಬೇಡಿ. ಮನುಷ್ಯರಿಗೆ ಆಸೆ ಇರಬೇಕು. ಆದರೆ, ದುರಾಸೆ ಇರಬಾರದು. ಎಲ್ಲರೂ ಬದುಕಿರುವಷ್ಟು ದಿನ ಚೆನ್ನಾಗಿ ಜೀವನ ನಡೆಸಿ. ಸುಮ್ಮನೆ ಕೋರ್ಟು-ಕಚೇರಿ ಎಂದು ಅಲೆದು ಹಣ ಹಾಗೂ ಸಮಯ ಹಾಳು ವಾಡಿಕೊಳ್ಳಬೇಡಿ. ಸಹೋದರ ಭಾವದಿಂದ, ನಾವೆಲ್ಲರೂ ಒಂದೇ ಎಂಬ ಮನೋಭಾವದಿಂದ ಬದುಕಿ ಎಂದು ಕೆ.ಎನ್. ಣೀಂದ್ರ ಜೀವನದ ಪಾಠ ವಾಡಿದರು.

    ಹದಿನೆಂಟು ಜನರಿಗೆ ನ್ಯಾಯದಾನ

    ಜಿಲ್ಲೆಯ ಒಟ್ಟು 43 ಪ್ರಕರಣಗಳ ವಿಚಾರಣೆಗೆ ದೂರುದಾರರು ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಬರಲು ಸೂಚಿಸಲಾಗಿತ್ತು. ಇದರಲ್ಲಿ 10 ಪ್ರಕರಣಗಳ ದೂರುದಾರರು ಗೈರಾಗಿದ್ದು ವಿಚಾರಣೆ ಮುಂದೂಡಲಾಯಿತು. ವಿಚಾರಣೆಗೊಳಪಟ್ಟ 33 ಪ್ರಕರಣಗಳಲ್ಲಿ 18 ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತು. ಉಳಿದ 15 ಪ್ರಕರಣಗಳಿಗೆ ಗಡುವು, ತನಿಖೆಗೆ ಸೂಚನೆ ನೀಡಿ, ಇನ್ನೊಮ್ಮೆ ವಿಚಾರಣೆಗೆ ದಿನ ನಿಗದಿ ಮಾಡಲು ಉಪಲೊಕಾಯುಕ್ತರು ಸೂಚಿಸಿದರು.

    ಎಚ್ಚರಿಕೆ ನೀಡಿದ ನ್ಯಾಯಮೂರ್ತಿ

    ಪ್ರಕರಣಗಳ ವಿಚಾರಣೆ ನಡೆಸುವ ಮೊದಲು ಉಪಲೋಕಾಯುಕ್ತ ಫಣೀಂದ್ರ ಮಾತನಾಡಿ, ಅಧಿಕಾರಿಗಳು ಹಾಗೂ ದೂರುದಾರರು ಶಾಂತ ರೀತಿಯಿಂದ ವರ್ತಿಸಬೇಕು. ಪ್ರಕರಣ ಯಾವ ಹಂತದಲ್ಲಿದೆ? ವಿಚಾರಣೆ ಏನಾಗಿದೆ ಎನ್ನುವುದನ್ನು ಸತ್ಯ ಹಾಗೂ ಸ್ಪಷ್ಟವಾಗಿ ತಿಳಿಸಬೇಕು. ಯಾರಾದರೂ ಏರುದನಿಯಲ್ಲಿ ವಾತನಾಡಿದರೆ, ಅಸಭ್ಯವಾಗಿ ವರ್ತಿಸಿದರೆ ಲೋಕಾಯುಕ್ತದ ಕಾನೂನಿನಂತೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಅಧಿಕಾರಿಗಳ ತರಾಟೆ

    ಪ್ರಕರಣವೊಂದಕ್ಕೆ ಸಂಬಂಧಿಸಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದರೂ ಕ್ರಮಕೈಗೊಳ್ಳದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಎಷ್ಟೇ ವರ್ಷದಿಂದ ಮನೆ ಕಟ್ಟಿ ವಾಸ ಮಾಡುತ್ತಿದ್ದರೂ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟುವುದೂ ತಪ್ಪು ಎಂದು ದೂರುದಾರರಿಗೆ ಕಾನೂನಿನ ಅರಿವು ಮೂಡಿಸಿದರು.

    189 ಹೊಸ ದೂರುಗಳು ದಾಖಲು

    ಜಿಲ್ಲೆಯ ಜನರಿಗೆ ಲೋಕಾಯುಕ್ತಕ್ಕೆ ನೇರವಾಗಿ ದೂರು ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಮೂರು ಕೌಂಟರ್ ತೆರೆಯಲಾಗಿತ್ತು. ಭಾನುವಾರ 155 ಹಾಗೂ ಸೋಮವಾರ 34 ಸೇರಿ ಒಟ್ಟು 189 ಹೊಸ ದೂರುಗಳು ದಾಖಲಾದವು. ಇವುಗಳಲ್ಲಿ 125 ಪ್ರಕರಣಗಳ ಪ್ರಾಥಮಿಕ ತನಿಖೆ ನಡೆಸಿದರು. ಉಳಿದ 64 ಪ್ರಕರಣಗಳನ್ನು ಜಿಲ್ಲಾ ಲೋಕಾಯುಕ್ತ ಕಚೇರಿಗೆ ಹಸ್ತಾಂತರಿಸಿ, ಅವುಗಳ ತನಿಖೆ ನಡೆಸಿ ವರದಿ ಸಿದ್ಧಪಡಿಸುವಂತೆ ಸೂಚನೆ ನೀಡಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts