More

    ಬರ ಘೋಷಿತ ತಾಲೂಕಿಗೆ ಮಾತ್ರ ಅನುದಾನವೆಂದ ತಹಸೀಲ್ದಾರ್: ಟಾಸ್ಕ್‌ಫೋರ್ಸ್ ಸಭೆಯಲ್ಲಿ ಶಾಸಕರು ಗರಂ

    ಗಂಗೊಳ್ಳಿ: ಬರ ಘೋಷಣೆಯಾದ ತಾಲೂಕುಗಳಿಗೆ ಮಾತ್ರ ಕೊಳವೆಬಾವಿ ತೆಗೆಸಲು, ಬಾವಿ ತೋಡಿಸಲು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸರ್ಕಾರದಿಂದ ಅನುದಾನ ದೊರೆಯುತ್ತದೆ. ಇತರ ಕಡೆಗಳಿಗೆ ಸ್ಥಳೀಯ ಅನುದಾನವನ್ನೇ ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ ಎಂದು ತಹಸೀಲ್ದಾರ್ ಶೋಭಾಲಕ್ಷ್ಮಿ ನೀಡಿದ ಮಾಹಿತಿ ಶಾಸಕರ ಅಸಮಾಧಾನಕ್ಕೆ ಕಾರಣವಾಯಿತು.

    ಶುಕ್ರವಾರ ಕುಂದಾಪುರದ ತಾಲೂಕು ಕಚೇರಿಯಲ್ಲಿ ನಡೆದ ಬರ, ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳ ಮೇವು ನಿರ್ವಹಣೆ ಕುರಿತಾದ ಟಾಸ್ಕ್‌ಫೋರ್ಸ್ ಸಭೆಯಲ್ಲಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

    ಬರ ಘೋಷಣೆಯಾಗದ ತಾಲೂಕುಗಳಿಗೆ ಬೇಸಗೆಯಲ್ಲಿ ತುರ್ತು ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು ವಿಶೇಷ ಅನುದಾನ ಇಲ್ಲ ಎಂದು ಸರ್ಕಾರ ಹೇಳಿರುವುದು ಚರ್ಚೆಗೆ ಕಾರಣವಾಯಿತು.

    ತಹಸೀಲ್ದಾರ್ ಉತ್ತರಕ್ಕೆ ಆಕ್ಷೇಪ

    ತಹಸೀಲ್ದಾರ್ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಪಂಚಾಯಿತಿಗಳಲ್ಲಿ ಅಷ್ಟು ಪ್ರಮಾಣದಲ್ಲಿ ಅನುದಾನ ಇರುವುದಿಲ್ಲ. ಕೊಳವೆಬಾವಿ ಕೊರೆಸಲು, ಬಾವಿ ತೋಡಿಸುವಷ್ಟು ಅನುದಾನ ಇಲ್ಲದ ಮೇಲೆ ಅವರೇನು ಮಾಡಿಯಾರು? ಈಗಾಗಲೇ ನಿಗದಿ ಮಾಡಿದ ದರಕ್ಕೆ ಕಡಿಮೆಯಾಯಿತು ಎಂದು ನೀರು ಸರಬರಾಜು ಮಾಡಲು ಯಾವುದೇ ಟ್ಯಾಂಕರ್‌ನವರು ಒಪ್ಪುತ್ತಿಲ್ಲ. ಹೆಚ್ಚುವರಿ ಹಣ ಕೊಡುವಂತಿಲ್ಲ. ಸರ್ಕಾರದ ನಿಯಮಕ್ಕೆ ವಿರುದ್ಧವಾಗುತ್ತದೆ. ಇದನ್ನು ಹೇಗೆ ಬಗೆಹರಿಸುವುದು ಎಂದು ಪ್ರಶ್ನಿಸಿದರು. ಬರ ಎಂದು ಘೋಷಣೆ ಮಾಡದಿರುವುದು ಜನರ ತಪ್ಪಲ್ಲ. ಕುಡಿಯುವ ನೀರಿಗೆ ಸಮಸ್ಯೆಯಾದಾಗ ಸ್ಪಂದಿಸಬೇಕಾದ್ದು ಸರ್ಕಾರದ ಕರ್ತವ್ಯ. ಹಾಗಿರುವಾಗ ಹಣ ನೀಡದೇ ತೊಂದರೆ ಮಾಡುವುದು ಸರಿಯಲ್ಲ ಎಂದರು.

    ಬೈಂದೂರು ತಹಸೀೀಲ್ದಾರ್ ಪ್ರದೀಪ್, ಬೈಂದೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭಾರತಿ, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಾಬಣ್ಣ ಪೂಜಾರಿ, ಬೈಂದೂರು ಸಹಾಯಕ ನಿರ್ದೇಶಕ ಡಾ.ನಾಗರಾಜ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ರೂಪಾ ಮಾಡ, ಉಪತಹಸೀಲ್ದಾರ್ ವಿನಯ್, ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ ಮೊದಲಾದವರು ಇದ್ದರು.

    ನಾಟಕ ಮಾಡಲು ಸಭೆ ಕರೆದಿರಾ?

    ಎಲ್ಲವನ್ನೂ ಸ್ಥಳೀಯವಾಗಿ ನಿರ್ವಹಣೆ ಮಾಡುವುದಾದರೆ ಟಾಸ್ಕ್‌ಫೋರ್ಸ್ ಕೆಲಸ ಏನು? ನಮ್ಮನ್ನು ಆಹ್ವಾನಿಸಿ ಸಭೆ ಕರೆಯುವ ಉದ್ದೇಶ ಏನು? ನಾಟಕ ಮಾಡಿಸಲು ಸಭೆ ಕರೆಯುವುದೇ? ಕೇವಲ ಸಭೆ ನಡೆದಿದೆ ಎಂಬ ದಾಖಲೆಗಾಗಿ ನಮ್ಮನ್ನು ಆಹ್ವಾನಿಸುವ ಅಗತ್ಯವಿಲ್ಲ. ಜನರ ಸಮಸ್ಯೆಗೆ ಪರಿಹಾರ ಇದ್ದರೆ ಮಾತ್ರ ಕರೆಯಿರಿ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಅಸಮಾಧಾನ ವ್ಯಕ್ತಪಡಿಸಿದರು.

    ಪಂಚಾಯಿತಿ ಯಾಕೆ ನೀಡಬೇಕು?

    ಬರ ನಿರ್ವಹಣೆಗೆ ಸಭೆ ಕರೆಯುವುದು ತಹಸೀಲ್ದಾರ್. ಬರ ನಿರ್ವಹಣೆ ಸಮಿತಿ ಟಾಸ್ಕ್‌ಫೋರ್ಸ್‌ನ ತಾಲೂಕು ಅಧ್ಯಕ್ಷತೆ ತಹಸೀಲ್ದಾರ್‌ಗೆ. ಗ್ರಾಮಗಳಲ್ಲಿ ಕುಡಿಯುವ ನೀರಿನ ಸಾಗಾಟಕ್ಕೆ ಟ್ಯಾಂಕರ್‌ಗೆ ಗುತ್ತಿಗೆ ಕರೆಯುವುದು ತಹಸೀಲ್ದಾರ್. ಟ್ಯಾಂಕರ್‌ಗೆ ಕಿ.ಮೀ.ಗೆ ಇಷ್ಟು ಎಂದು ದರ ನಿಗದಿ ಮಾಡುವುದು, ಟ್ಯಾಂಕರ್‌ಗೆ ಹಣ ನೀಡಲು ಅನುಮತಿ ನೀಡುವುದು ಅವರೇ. ಆದರೆ ಹಣ ನೀಡಬೇಕಾದ್ದು ಗ್ರಾಮ ಪಂಚಾಯಿತಿ!. ಇದು ಯಾವ ಕ್ರಮ? ಎಂದು ಶಾಸಕರು ಪ್ರಶ್ನಿಸಿದರು.

    ಕಳೆದ ಬಾರಿಯ ಬಿಲ್ ಪಾವತಿಸಿಲ್ಲ

    ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಕಳೆದ ಬಾರಿಯೂ ಟ್ಯಾಂಕರ್ ಮೂಲಕ ಸರಬರಾಜು ಮಾಡಿದ ನೀರಿಗೆ ತಾಲೂಕು ಆಡಳಿತ ಹಣ ನೀಡಿಲ್ಲ. ಈ ವರ್ಷ ನೀರಿನ ಕೊರತೆ ಹೆಚ್ಚಾಗಬಹುದು. ಈಗಾಗಲೇ ಕುಂದಾಪುರ, ಬೈಂದೂರಿನಲ್ಲಿ ಕಿಂಡಿ ಅಣೆಕಟ್ಟುಗಳ ಹಲಗೆಗಳನ್ನು ಪ್ರತಿಭಟನೆ ಮಾಡಿ ಬೇಗನೇ ಹಾಕಿಸಲಾಗಿದೆ. ಈ ಮೂಲಕವಾದರೂ ಅಂತರ್ಜಲ ಇಂಗಲಿ. ಕುಡಿಯವ ನೀರಿನ ಸಮಸ್ಯೆ ನಿವಾರಣೆಗೆ ಸಹಾಯ ಆಗಲಿ ಎಂದು ಹೀಗೆ ಮಾಡಿದ್ದೇವೆ ಎಂದು ಗಂಟಿಹೊಳೆ ತಿಳಿಸಿದರು.

    ತಾಪಂ ಹಣ ಬರದೆ 2 ವರ್ಷ

    ತಾಲೂಕು ಪಂಚಾಯಿತಿಗೆ ಅನುದಾನ ಬರದೆ 2 ವರ್ಷವಾಯಿತು ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್ ಹೇಳಿದರು. ಯಾವೆಲ್ಲ ಪಂಚಾಯಿತಿಗಳಲ್ಲಿ ಕೊಳವೆಬಾವಿ, ಬಾವಿ ತೆಗೆಸುವ ತುರ್ತು ಅವಶ್ಯಕತೆ ಇದೆ ಎನ್ನುವ ಪಟ್ಟಿ ಕೊಡಿ. ಅನುದಾನ ಮಂಜೂರಿಗೆ ಪ್ರಯತ್ನ ನಡೆಸಲಾಗುವುದು ಎಂದು ಉಭಯ ಶಾಸಕರು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts