More

    ಇನ್ನಾದಲ್ಲಿ ವಿದ್ಯುತ್ ಟವರ್ ಸರ್ವೇಗೆ ಗ್ರಾಮಸ್ಥರ ತಡೆ: ಮಾತಿನ ಚಕಮಕಿ, ಸ್ಥಳೀಯರ ಮನವೊಲಿಕೆಗೆ ವಿಫಲ ಯತ್ನ

    ವಿಜಯವಾಣಿ ಸುದ್ದಿಜಾಲ ಕಾರ್ಕಳ
    ಉಡುಪಿಯಿಂದ ಕೇರಳಕ್ಕೆ ವಿದ್ಯುತ್ ಪೂರೈಸುವ ಟವರ್ ನಿರ್ಮಾಣ ಸಲುವಾಗಿ ಸರ್ವೇಗೆ ಮುಂದಾದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಅಧಿಕಾರಿಗಳನ್ನು ವಾಪಸ್ ಕಳುಹಿಸಿದ ಘಟನೆ ಇನ್ನಾ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

    ಇನ್ನಾ ಗ್ರಾಪಂ ವ್ಯಾಪ್ತಿಯ ಹೈಸ್ಕೂಲ್ ಬಳಿಯ ಸರ್ಕಾರಿ ಜಾಗದಲ್ಲಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಕಾರ್ಕಳ ತಹಸೀಲ್ದಾರ್ ಹಾಗೂ ಅಧಿಕಾರಿಗಳ ಸಮ್ಮುಖ ಟವರ್ ನಿರ್ಮಾಣಕ್ಕಾಗಿ ಸರ್ವೆಗೆ ಮುಂದಾದಾಗ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತಗೊಂಡಿದ್ದು, ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ.

    ಈಗಾಗಲೇ ಉಡುಪಿಯಿಂದ ಇನ್ನಾ, ಮುಂಡ್ಕೂರು, ಬಳ್ಕುಂಜೆ, ನಂದಿಕೂರು, ಬೆಳ್ಮಣ್, ನಿಟ್ಟೆ, ಕಾರ್ಕಳ, ಹೀಗೆ ಅನೇಕ ಭಾಗದಲ್ಲಿ ಮೊದಲ ಹಂತದಲ್ಲಿ ವಿದ್ಯುತ್ ತಂತಿ ಹಾದು ಹೋಗಲು ಸಾಕಷ್ಟು ಎಕರೆ ಕೃಷಿ ಭೂಮಿಗಳನ್ನು ರೈತರು ಕಳೆದುಕೊಂಡಿದ್ದು, ಇದೀಗ ಮತ್ತೆ ಎರಡನೇ ಹಂತದಲ್ಲಿ ಮತ್ತೊಂದು 400 ಕೆ.ವಿ ಲೈನ್ ಎಳೆಯಲು ಕ್ಷಣಗಣನೆ ಆರಂಭಗೊಂಡಿದೆ. ಈಗಾಗಲೇ ಅನೇಕ ಬಾರಿ ಸರ್ವೆಗಳೂ ನಡೆದಿವೆ.

    ಇನ್ನಾದಲ್ಲಿ ವಿದ್ಯುತ್ ಟವರ್ ಸರ್ವೇಗೆ ಗ್ರಾಮಸ್ಥರ ತಡೆ: ಮಾತಿನ ಚಕಮಕಿ, ಸ್ಥಳೀಯರ ಮನವೊಲಿಕೆಗೆ ವಿಫಲ ಯತ್ನ

    ವಿದ್ಯುತ್ ಟವರ್‌ಗಳು ನಿರ್ಮಾಣವಾದಲ್ಲಿ ಸುಮಾರು 25 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಸಾದ್ಯತೆಯಿದೆ. ಒಟ್ಟು ಎರಡನೇ ಹಂತದ ಲೈನ್ ಹಾದು ಹೋಗಲು ಸುಮಾರು 8 ಟವರ್‌ಗಳನ್ನು ಗ್ರಾಮದಲ್ಲಿ ನಿರ್ಮಿಸಲಾಗುತ್ತದೆ. ಇದನ್ನು ಗ್ರಾಮಸ್ಥರು ವಿರೋಧಿಸಿದ್ದು, ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮನವೊಲಿಕೆಗೆ ವಿಫಲ ಯತ್ನ ನಡೆಸಿದರು.

    ಈ ಸಂದರ್ಭ ಕಾರ್ಕಳ ತಹಸೀಲ್ದಾರ್ ನರಸಪ್ಪ, ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಎಸ್‌ಎಂ, ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಕುಮಾರ್, ಇನ್ನಾ ಗ್ರಾಮಕರಣಿಕ ಹನುಮಂತ, ಜಿಪಂ ಮಾಜಿ ಸದಸ್ಯೆ ರೇಶ್ಮಾ ಉದಯ್ ಶೆಟ್ಟಿ, ಇನ್ನಾ ಗ್ರಾಪಂ ಅಧ್ಯಕ್ಷೆ ಸರಿತಾ ಶೆಟ್ಟಿ, ಮಾಜಿ ಅಧ್ಯಕ್ಷ ಕುಶಾ ಆರ್ ಮೂಲ್ಯ, ಸದಸ್ಯರಾದ ಚಂದ್ರಹಾಸ್ ಶೆಟ್ಟಿ, ದೀಪಕ್ ಕೋಟ್ಯಾನ್, ಗ್ರಾಮಸ್ಥರಾದ ಅಮರನಾಥ್ ಶೆಟ್ಟಿ ಇದ್ದರು.

    25 ಎಕರೆ ಕೃಷಿ ಭೂಮಿಗೆ ಕುತ್ತು

    ಇನ್ನಾ ಗ್ರಾಮದಲ್ಲಿ ಈಗಾಗಲೇ ಹಲವಾರು ಕೈಗಾರಿಕೆಗಳಿಂದ ಸ್ಥಳೀಯ ಕೃಷಿಕರು ತಮ್ಮ ಕೃಷಿ ಭೂಮಿ ಕಳೆದುಕೊಳ್ಳುವಂತಾಗಿದೆ. ಹಾಸನಕ್ಕೆ ಯುಪಿಸಿಎಲ್‌ನ ವಿದ್ಯುತ್ ತಂತಿಗಳು ಹಾದು ಹೋಗಿ ನೂರಾರು ಎಕರೆ ಕೃಷಿ ಭೂಮಿ ಹಾಗೂ ಪಾದೂರು ಪೈಪ್ ಲೈನ್‌ಗಾಗಿ ಮತ್ತೊಂದಿಷ್ಟು ಕೃಷಿ ಭೂಮಿ, ಎರಡನೇ ಹಂತದ ಕೇರಳಕ್ಕೆ ಸಾಗುವ ವಿದ್ಯುತ್ ಸರಬರಾಜಿಗಾಗಿ ಟವರ್‌ಗಳನ್ನು ನಿರ್ಮಿಸಲು ಮತ್ತೆ ಸುಮಾರು 25 ಎಕರೆ ಭೂಮಿ ಇನ್ನಾದ ಜನ ಕಳೆದುಕೊಳ್ಳುವಂತಾಗಿದೆ. ಜತೆಗೆ ಜೀವ ಸಂಕುಲಗಳಿಗೂ ತೊಂದರೆಯಾಗುತ್ತದೆ ಎನ್ನುವುದು ಗ್ರಾಮಸ್ಥರ ಆಕ್ರೋಶ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts