More

    ಜಿಲ್ಲೆಯಲ್ಲಿ ಕುಸಿದ ಮುಂಗಾರು ಭತ್ತ ಇಳುವರಿ: ಬೇಸಾಯದತ್ತ ಜನರ ನಿರಾಸಕ್ತಿ

    ಪ್ರಶಾಂತ ಭಾಗವತ ಉಡುಪಿ
    ಜಿಲ್ಲೆಯಲ್ಲಿ ಒಂದೆಡೆ ಮಳೆ ಕೊರತೆ, ಇನ್ನೊಂದೆಡೆ ನಿಗದಿತ ಗುರಿಯಲ್ಲೂ ಹಿನ್ನಡೆಯಿಂದಾಗಿ ಮುಂಗಾರು ಭತ್ತ ಉತ್ಪಾದನೆ ಕುಂಠಿತಗೊಂಡಿದೆ. ಇದಲ್ಲದೆ, ಮಳೆ ಕೊರತೆಯಿಂದಾಗಿ ಭತ್ತದ ಬೆಳೆಯೂ ಹಾನಿಯಾಗಿ, ಬೆಳೆಗಾರ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.

    ಜಿಲ್ಲಾ ಕೃಷಿ ಇಲಾಖೆಯ ಮಾಹಿತಿಯಂತೆ 2023-24ನೇ ಸಾಲಿನ ಭತ್ತ ಬಿತ್ತನೆಯ ಗುರಿ 38,000 ಹೆಕ್ಟೇರ್ ಇದ್ದು, 35,508 ಹೆಕ್ಟೇರ್ ಪ್ರಗತಿ ಸಾಧಿಸಿದ್ದು, 2,492 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಆಗಿಲ್ಲ. ಸರ್ಕಾರವೇನೋ ಒಂದಿಷ್ಟು ತಾಲೂಕುಗಳನ್ನು ಬರಪೀಡಿತ ಎಂದು ೋಷಿಸಿ, ರೈತರ ಖಾತೆಗೆ 2 ಸಾವಿರ ರೂ. ಪರಿಹಾರ ನೀಡಿದೆ. ಹೀಗಾದರೆ ಭತ್ತ ಕೃಷಿ, ಬೆಳೆಗಾರನ ಕಥೆ ಏನು ಎಂಬ ಪ್ರಶ್ನೆ ಉದ್ಭವಿಸಿದೆ.

    ಕುಸಿದ ಮುಂಗಾರು ಭತ್ತ ಇಳುವರಿ

    ಉಡುಪಿ ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 4571 ಮಿ.ಮೀ. ಇದೆ. ಇದರಲ್ಲಿ 2023ರ ನವೆಂಬರ್ 16ರ ವರೆಗೆ 4492 ವಾಡಿಕೆ ಮಳೆ ಆಗಬೇಕಿತ್ತು. ಆದರೆ, 3483.40 ಮಿ.ಮೀ. ಮಳೆ ಸುರಿದಿದ್ದು ಶೇ.22 ಮಳೆ ಕೊರತೆ ಆಗಿದೆ. ಇದರಿಂದ ಬಿತ್ತನೆ ಮಾಡಿದ ಭತ್ತದ ಸಸಿಗಳು ಸಮರ್ಪಕವಾಗಿ ಬೆಳೆಯದೆ ಹಳದಿ ಬಣ್ಣಕ್ಕೆ ತಿರುಗಿ ಭತ್ತದ ಇಳುವರಿ ಕಡಿಮೆಯಾಗಲು ಕಾರಣವಾಗಿದೆ.

    ಭತ್ತ ಬೀಜ ವಿತರಣೆ ಮಾಹಿತಿ

    ಮುಂಗಾರು ಹಂಗಾಮಿನಲ್ಲಿ (2023-24ನೇ ಸಾಲಿನಲ್ಲಿ) 2,500 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದ್ದು, 2,354.50 ಕ್ವಿಂಟಲ್ ವಿತರಿಸಲಾಗಿದೆ. 2022-23ನೇ ಸಾಲಿನಲ್ಲಿ 2074.70 ಕ್ವಿಂಟಾಲ್ ವಿತರಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಮುಂಗಾರಿನಲ್ಲಿ ಭತ್ತದ ಬೀಜ ಪೂರೈಕೆ ಪ್ರಮಾಣ ಹೆಚ್ಚಿದೆ.

    ಇಳುವರಿ ಕುಸಿತಕ್ಕೆ ಕಾರಣವೇನು?

    ವರ್ಷದಿಂದ ವರ್ಷಕ್ಕೆ ಭತ್ತ ಬೆಳೆಯುವ ಕೃಷಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಭತ್ತ ಬೆಳೆಯುವ ಗದ್ದೆಗಳಲ್ಲಿ ಮನೆ, ಕಮರ್ಷಿಯಲ್ ಕಟ್ಟಡ ನಿರ್ಮಾಣವಾಗತೊಡಗಿದೆ. ಭತ್ತ ಕೃಷಿಯ ಕಾರ್ಮಿಕರು ಹಾಗೂ ಕೂಲಿ ಆಳುಗಳ ಸಮಸ್ಯೆ ಇದೆ. ಇದರೊಟ್ಟಿಗೆ ಕೌಶಲಾಧಾರಿತ ಕೆಲಸಗಾರರ ಕೊರತೆಯೂ ಸೇರಿದೆ.

    ಕೃಷಿಯಲ್ಲಿ ರೈತರಿಗೆ ನಿರಾಸಕ್ತಿ

    ಕೃಷಿಯೆಂದರೆ ದುಬಾರಿ ಎಂಬ ಮನೋಭಾವ ಮೂಡುತ್ತಿದ್ದು, ಕೃಷಿಯಿಂದ ವಿಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇವೆಲ್ಲದರ ನಡುವೆ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ದಿನೇದಿನೆ ಏರುತ್ತಲಿದೆ.

    ರಾಸಾಯನಿಕ ಗೊಬ್ಬರ ವಿವರ

    ಮುಂಗಾರು ಹಂಗಾಮಿನಲ್ಲಿ ಮೆಟ್ರಿಕ್ ಟನ್ ಅಳತೆಯಲ್ಲಿ ರಾಸಾಯನಿಕ ಗೊಬ್ಬರದ ಸರಬರಾಜು-ವಿತರಣೆ ಮಾಹಿತಿ ಇಂತಿದೆ.
    ಗೊಬ್ಬರ ಸರಬರಾಜು ವಿತರಣೆ
    ಯೂರಿಯಾ
    2474.76 1960.09
    ಡಿಎಪಿ 1158.49 998.68
    ಎಂಒಪಿ 1476.74 1097.07
    ಕಾಂಪ್ಲೆಕ್ಸ್ 4381.54 2766.04
    ಒಟ್ಟು 9491.52 6821.86

    ಬರ ತಾಲೂಕುಗಳು, ಹಾನಿ, ಪರಿಹಾರ ಮಾಹಿತಿ

    ತಾಲೂಕು ಹಾನಿ ಪ್ರದೇಶ (ಹೆ) ಪರಿಹಾರ ಮೊತ್ತ (ಲಕ್ಷ ರೂ.)
    ಬ್ರಹ್ಮಾವರ
    8,551 726.835
    ಕಾರ್ಕಳ 4,103 348.755
    ಹೆಬ್ರಿ 1,283 109.055
    ಒಟ್ಟು 13,937 1184.645

    ಮಳೆ ಕಡಿಮೆಯಾಗುತ್ತದೆ ಎಂಬ ಮಾಹಿತಿ ಲಭಿಸಿದ ಕೂಡಲೇ ಇನ್ನಿತರ ಬಗೆಯ ಭತ್ತದ ಕೃಷಿ ಕೈಗೊಳ್ಳಬೇಕು. ಶ್ರೀ ಪದ್ಧತಿ, ಯಾಂತ್ರೀಕೃತ ನಾಟಿ, ಕೂರಿಗೆ ಬಿತ್ತನೆ, ಜತೆಗೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ನಷ್ಟ ತಪ್ಪಿಸಿಕೊಳ್ಳಬಹುದು. ಕೃಷಿ ನಿರ್ವಹಣೆಯ ವೆಚ್ಚ ಕಡಿಮೆ ಮಾಡಲು ಮನೆಯವರೆಲ್ಲರೂ ಕೃಷಿಯಲ್ಲಿ ತೊಡಗಿಕೊಳ್ಳುವಂತಾಗಬೇಕು. ಕೃಷಿ ಇಲಾಖೆಯಷ್ಟೇ ಅಲ್ಲದೆ, ಸ್ವಸಹಾಯ ಸಂಘಗಳು, ವ್ಯವಸಾಯ ಸೇವಾ ಸಹಕಾರಿ ಸಂಘಗಳೂ ಗ್ರಾಮೀಣ ಭಾಗದಲ್ಲಿ ಸಣ್ಣ ಬಾಡಿಗೆ ಆಧಾರಿತ ಸೇವಾ ಕೇಂದ್ರ ತೆರೆದು, ರೈತರಿಗೆ ಭತ್ತ ಕೃಷಿ ಮಾಡಲು ನೆರವಾಗಬೇಕು.
    -ಮೋಹನ್‌ರಾಜ್ ಸಹಾಯಕ ಕೃಷಿ ನಿರ್ದೇಶಕ, ಉಡುಪಿ ತಾಲೂಕು

    ಇತ್ತೀಚೆಗೆ ಭತ್ತ ಸಾಗುವಳಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಕಷ್ಟಪಟ್ಟು ಸಾಗುವಳಿ ಮಾಡಿದರೂ ಸಮಯಕ್ಕೆ ಸರಿಯಾಗಿ ಮಳೆಯಿಲ್ಲದೆ, ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ನಾಶವಾಗುತ್ತಿದೆ. ಇದರಿಂದ ರೈತರು ಕೃಷಿಭೂಮಿ ಮಾರಾಟ ಮಾಡಿ ಪಟ್ಟಣದತ್ತ ಮುಖ ಮಾಡುತ್ತಿದ್ದಾರೆ. ಹಣ ಇಲ್ಲದಿದ್ದರೂ ಕೆಲಕಾಲ ಬದುಕಬಹುದು. ಆದರೆ, ಹೊಟ್ಟೆಗೆ ಊಟ ಇಲ್ಲದೆ ಹಾಹಾಕಾರ ಉಂಟಾಗಬಹುದು. ಈ ಕುರಿತು ಜನರು, ಸರ್ಕಾರ ಯೋಚಿಸಬೇಕಾದ ಅನಿವಾರ್ಯತೆ ಇದೆ.
    -ರಾಜೇಂದ್ರ ಬೆಚ್ಚಳ್ಳಿ ಭತ್ತ ಬೆಳೆಗಾರ, ಸಿದ್ದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts