More

    ಪೌರ ಕಾರ್ಮಿಕರ ಅನಧಿಕೃತ ಗೈರು: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆ

    ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿದೆಯೇ? ಎಂದು ಪೌರಕಾರ್ಮಿಕರ ಕಾರ್ಯನಿರ್ವಹಣೆಯ ಬಗ್ಗೆ ಕಾಂಗ್ರೆಸ್‌ನ ಶ್ರೀನಿವಾಸ್ ಅಮೀನ್ ಪ್ರಶ್ನಿಸಿದರು.

    ಆಡಳಿತಾಧಿಕಾರಿ ಶ್ರೀಕಾಂತ್ ಎಸ್.ಹೆಗ್ಡೆ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಲಿಗ್ರಾಮ ಪಟ್ಟಣಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಯಿತು.

    ಪ್ರಶ್ನೆಗೆ ಉತ್ತರಿಸಿದ ಮುಖ್ಯಾಧಿಕಾರಿ ಶಿವ ನಾಯ್ಕಾ, ತ್ಯಾಜ್ಯ ವಿಲೇವಾರಿಯಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಕೆಲ ಪೌರಕಾರ್ಮಿಕರು ಗೈರಾಗುತ್ತಿದ್ದಾರೆ ಎಂದು ಆಡಳಿತಾಧಿಕಾರಿಗಳ ಗಮನಕ್ಕೆ ತಂದರು. ಈ ಬಗ್ಗೆ ಲಿಖಿತ ಮಾಹಿತಿ ಪಡೆದ ಆಡಳಿತಾಧಿಕಾರಿ, ಗೈರು ಹಾಜರಾದ ಪೌರಕಾರ್ಮಿಕರ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಲ್ಲದೆ ಸದಸ್ಯರ ನಿಲುವು ಪಡೆದು ಎಚ್ಚರಿಕೆ ನೀಡುವಂತೆ ಸೂಚಿಸಿದರು.

    ಕಳೆದೊಂದು ವರ್ಷದಿಂದ ಸಾಲಿಗ್ರಾಮ ಪ.ಪಂ ಆಡಳಿತ ಅಧಿಕಾರಿಗಳ ಮೂಲಕ ನಡೆಯುತ್ತಿದ್ದು ಜನಪ್ರತಿನಿಧಿಗಳ ಒತ್ತಡದ ಹಿನ್ನೆಲೆಯಲ್ಲಿ ವಿಶೇಷಾಧಿಕಾರಿ, ಬ್ರಹ್ಮಾವರ ತಹಸೀಲ್ದಾರ್ ಮೂಲಕ ಬುಧವಾರ ಸಾಮಾನ್ಯ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಜನಪ್ರತಿನಿಧಿಗಳು ಭಾಗವಹಿಸಿ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದರು.

    ಪಟ್ಟಣ ಪಂಚಾಯಿತಿ ತ್ಯಾಜ್ಯ ವಿಲೇ ಭೂಮಿ ಖರೀದಿಯಲ್ಲಿ ಅವ್ಯವಸ್ಥೆ

    ಸಾಲಿಗ್ರಾಮ ಪಪಂನ ಪಾರಂಪಳ್ಳಿ ತ್ಯಾಜ್ಯವಿಲೇವಾರಿ ಸ್ಥಳ ಖರೀದಿ ಪಾರದರ್ಶಕವಾಗಿಲ್ಲ. ಜನಪ್ರತಿನಿಧಿಗಳ ಮೀಸಲಾತಿ ವಿಳಂಬವಾದ ಸಂದರ್ಭದಲ್ಲೇ ಹಿಂದಿನ ಮುಖ್ಯಾಧಿಕಾರಿ ಖರೀದಿ ವ್ಯವಹಾರ ಕೈಗೊಂಡಿದ್ದಾರೆ. ಅಲ್ಲದೆ ಅತಿ ಹೆಚ್ಚು ಹಣ ನೀಡಿ ಖರೀದಿಸಲಾಗಿದೆ. ಸಾಮಾನ್ಯನೊಬ್ಬ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಸ್ಥಳ ಖರೀದಿಸಿದರೆ ಅನ್ವಯವಾಗುವ ನಿಯಮಗಳು, ಘಟಕದ ಸ್ಥಳ ಖರೀದಿಗೆ ಆ ನಿಯಮ ಇಲ್ಲವೇ?. ಖರೀದಿಯಲ್ಲಿ ಜನಪ್ರತಿನಿಧಿಗಳಿಗೆ ಪಾಲಿದೆ ಎನ್ನುವ ಆರೋಪ ಕೇಳಿಬಂದಿದೆ. ಅಧಿಕಾರಿಗಳಿಂದ ಜನಪ್ರತಿನಿಧಿಗಳಿಗೆ ಕಳಂಕ. ಈ ಬಗ್ಗೆ ಉನ್ನತಮಟ್ಟದ ತನಿಖೆಗೆ ಆಗ್ರಹಿಸುತ್ತಿದ್ದೇವೆ ಎಂದು ಕಾಂಗ್ರೆಸ್‌ನ ಶ್ರೀನಿವಾಸ್ ಅಮೀನ್ ಆಗ್ರಹಿಸಿದರು. ಬಿಜೆಪಿಯ ರಾಜು ಪೂಜಾರಿ, ಸುಲತಾ ಹೆಗ್ಡೆ ಧ್ವನಿಗೂಡಿಸಿದರು.

    ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಕ್ರಮ

    ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲು ಆಡಳಿತಾಧಿಕಾರಿ ಶ್ರೀಕಾಂತ್ ಹೆಗ್ಡೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು. ಕಾಂಗ್ರೆಸ್‌ನ ಪುನಿತ್ ಪೂಜಾರಿ ಅಹವಾಲು ಸಲ್ಲಿಸಿ, ನಮ್ಮ ಭಾಗದಲ್ಲಿ ಸಾಕಷ್ಟು ಸಮಯದಿಂದ ಪೈಪ್‌ನಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜಾಗುತ್ತಿಲ್ಲ. ಪೈಪ್ ಒಡೆದು ನೀರು ಹೊರಗೆ ಹೋಗುತ್ತಿದ್ದರೂ ಈ ಬಗ್ಗೆ ಪ.ಪಂ ಅಧಿಕಾರಿ ವರ್ಗ ಕಣ್ಣು ಹಾಯಿಸಿಲ್ಲ ಎಂದು ಅಳಲು ತೋಡಿಕೊಂಡರು. ಈ ಬಗ್ಗೆ ಶೀಘ್ರ ಕ್ರಮಕೈಗೊಳ್ಳುವಂತೆ ಮುಖ್ಯಾಧಿಕಾರಿಗೆ ಆಡಳಿತಾಧಿಕಾರಿ ಸೂಚಿಸಿದರು.

    ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬ್ಯಾನರ್ ತೆರವಿನಲ್ಲಿ ತೇಜೋವಧೆ

    ಸಾಲಿಗ್ರಾಮ ಪ.ಪಂ ವ್ಯಾಪ್ತಿಯಲ್ಲಿ ಶ್ರೀರಾಮ ಮಂದಿರ ಪ್ರತಿಷ್ಠಾಪನೆ ಬ್ಯಾನರ್ ತೆರವು ಕಾರ್ಯದಲ್ಲಿ ನನ್ನ ಹೆಸರು ಬಳಸಿ ತೇಜೋವಧೆ ಮಾಡಲಾಗಿದೆ. ನಾನು ಈ ಬಗ್ಗೆ ಯಾವುದೇ ರೀತಿಯಲ್ಲಿ ಪ್ರಸ್ತಾಪಿಸಿಲ್ಲ. ಪ.ಪಂ ಹೊರ ವ್ಯವಸ್ಥೆಗೆ ಸುಳ್ಳು ಮಾಹಿತಿ ನೀಡಿದೆಯೇ? ಸಾಲಿಗ್ರಾಮ ಒಳಪೇಟೆಯ ಶ್ರೀರಾಮದೇಗುಲದ ಪರ ಸಾಕಷ್ಟು ಕಾರ್ಯನಿರ್ವಹಿಸಿದ್ದೇನೆ. ಹೀಗಿರುವಾಗ ಅಪಪ್ರಚಾರ ಏಕೆ? ಎಂದು ಕಾಂಗ್ರೆಸ್‌ನ ಶ್ರೀನಿವಾಸ್ ಅಮೀನ್ ಅಲವತ್ತುಕೊಂಡರು. ಈ ಬಗ್ಗೆ ಪ.ಪಂ ಅಪಪ್ರಚಾರ ಮಾಡಿಲ್ಲ. ಸರ್ಕಾರದ ಮಟ್ಟದಲ್ಲಿ ಬ್ಯಾನರ್ ತೆರವು ನಡೆದಿದೆಯಲ್ಲ? ನೀವೇಕೆ ಈ ರೀತಿ ವರ್ತಿಸುತ್ತಿದ್ದೀರಿ? ಎಂದು ರಾಜು ಪೂಜಾರಿ ಛೇಡಿಸಿದರು.

    ಪ್ರತಿಧ್ವನಿಸಿದ ಅಕ್ರಮ ಶೆಡ್, ಮರಳುಗಾರಿಕೆ

    ಸಾಲಿಗ್ರಾಮ ಪ.ಪಂ ವ್ಯಾಪ್ತಿಯ ಕಾರ್ಕಡದ ಮೂಡೋಳಿ ಭಾಗದಲ್ಲಿ ದೊಡ್ಡಮಟ್ಟದಲ್ಲಿ ಮರಳುಗಾರಿಕೆ ನಡೆಯುತ್ತಿದೆ. ಅಕ್ರಮ ಶೆಡ್ ನಿರ್ಮಾಣಕ್ಕೆ ಹೇಗೆ ಎನ್‌ಒಸಿ ನೀಡಿದ್ದೀರಿ? ಕಾನೂನು ಬಾಹಿರವಾಗಿ ಮರಳುಗಾರಿಕೆ ನಡೆಸಲು ಅವಕಾಶ ನೀಡಬೇಡಿ ಎಂದು ಶ್ರೀನಿವಾಸ ಅಮೀನ್ ಆಡಳಿತಾಧಿಕಾರಿಗಳ ಗಮನಕ್ಕೆ ತಂದರು. ಈ ಬಗ್ಗೆ ಬಿಜೆಪಿಯ ಸಂಜೀವ ದೇವಾಡಿಗ ಧ್ವನಿಗೂಡಿಸಿ, ಇದರಲ್ಲಿ ನಾವು ಯಾರೂ ಭಾಗಿಯಾಗಿಲ್ಲ. ಅಕ್ರಮ ಕಂಡು ಬಂದರೆ ಸೂಕ್ತ ಕ್ರಮಕೈಗೊಳ್ಳಿ ಎಂದರು. ಅಕ್ರಮ ಮರಳುಗಾರಿಕೆ ಕಂಡುಬಂದಲ್ಲಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಮುಖ್ಯಾಧಿಕಾರಿ ಉಲ್ಲೇಖಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts