More

    ಅಯೋಧ್ಯಾ ರಾಮಲಲ್ಲಾನನ್ನೇ ಹೋಲುವ ವಿಗ್ರಹ: ಸಕ್ಕಟ್ಟು ವಿಷ್ಣುಮೂರ್ತಿ ಬಿಂಬ ಸಕತ್ ವೈರಲ್

    ವಿಜಯವಾಣಿ ಸುದ್ದಿಜಾಲ ಉಡುಪಿ
    ಕೋಟ್ಯಂತರ ರಾಮಭಕ್ತರ ಕನಸಿನ ರಾಮಮಂದಿರ ಲೋಕಾರ್ಪಣೆಯಾದ ನಾಲ್ಕೈದು ದಿನದ ಬಳಿಕ, ಅಯೋಧ್ಯಾ ರಾಮಲಲ್ಲಾನ ಹೋಲಿಕೆ ಇರುವ ಬ್ರಹ್ಮಾವರದ ಸಕ್ಕಟ್ಟು ಗ್ರಾಮದ ಮಹಾವಿಷ್ಣುವಿನ ಮೂರ್ತಿ ಸಕತ್ ವೈರಲ್ ಆಗುತ್ತಿದೆ. ದೇಗುಲಕ್ಕೆ ಆಗಮಿಸಿ, ವೀಕ್ಷಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ.
    ಸುಮಾರು 13ನೇ ಶತಮಾನದ್ದು ಎನ್ನಲಾದ ಮೂರು ಅಡಿ ಎತ್ತರದ ಈ ಮೂರ್ತಿ, ಅಯೋಧ್ಯಾ ರಾಮನ ಮೂರ್ತಿಯ ವಿಧಾನದಲ್ಲಿಯೇ ಇರುವುದು ಈಗ ವಿಶೇಷ ಮಹತ್ವ ಪಡೆದಿದೆ. ಅಯೋಧ್ಯಾ ರಾಮನ ಮೂರ್ತಿಯ ಪ್ರಭಾವಳಿಯಲ್ಲಿ ಇರುವಂತೆ ಸಕ್ಕಟ್ಟು ವಿಷ್ಣು ಮೂರ್ತಿಯ ಪ್ರಭಾವಳಿಯಲ್ಲೂ ದಶಾವತಾರದ ಕೆತ್ತನೆ ಇರುವುದು ಜನರಲ್ಲಿ ಕುತೂಹಲ ಹೆಚ್ಚಿಸುತ್ತಿದೆ.

    ಪಾಳುಬಿದ್ದ ಸಕ್ಕಟ್ಟು ವಿಷ್ಣುಮೂರ್ತಿ ದೇಗುಲ

    ಐತಿಹಾಸಿಕ ನಗರಿ ಎಂದೇ ಕರೆಯಲ್ಪಡುವ ಬಾರಕೂರು ಎನ್ನುವ ಪ್ರದೇಶದಲ್ಲಿ 365 ದೇಗುಲಗಳು ಇದ್ದವು ಎನ್ನುವುದು ಐತಿಹ್ಯದಿಂದ ತಿಳಿದು ಬರುತ್ತದೆ. ಇದೀಗ ಬ್ರಹ್ಮಾವರ ತಾಲೂಕು ಶಿರಿಯಾರ ಗ್ರಾಮದ ಸಕ್ಕಟ್ಟು ಪ್ರದೇಶದಲ್ಲಿರುವ ವಿಷ್ಣುವಿನ ಮೂರ್ತಿಯೂ ರಾಮಲಲ್ಲಾನ ತದ್ರೂಪದಲ್ಲಿಯೇ ಇದೆ ಎಂದು ಸ್ಥಳೀಯರು ಹೇಳತೊಡಗಿದ್ದಾರೆ. ಆದರೆ, ಈ ದೇಗುಲ ಸಂಪೂರ್ಣ ಪಾಳುಬಿದ್ದಿದ್ದು, ಜೀರ್ಣಾವಸ್ಥೆಯಿಂದ ಅಭಿವೃದ್ಧಿ ಮಾಡಲು ಗ್ರಾಮಸ್ಥರು ಹಾಗೂ ದೇಗುಲದ ಆಡಳಿತ ನಿರ್ಧರಿಸಿದೆ.

    ಇತ್ತೀಚೆಗೆ ಪತ್ತೆಯಾಗಿತ್ತು ಶಿಲಾಶಾಸನ

    ಸಕ್ಕಟ್ಟು ವಿಷ್ಣುಮೂರ್ತಿ ದೇಗುಲದ ಸಮೀಪದ ಕೊಳ್ಕೆಬೈಲು ಗದ್ದೆಯಲ್ಲಿ ಆರೇಳು ತಿಂಗಳ ಹಿಂದೆ ಆಳುಪ ದೊರೆ ವೀರ ಪಾಂಡ್ಯನ ಶಿಲಾ ಶಾಸನ ಪತ್ತೆಯಾಗಿತ್ತು. ಶಾಸನದ ಹೆಚ್ಚಿನ ಸಾಲುಗಳು ಸವೆದಿದ್ದು, ಆರಂಭದ 12 ಸಾಲುಗಳು ಭಾಗಶಃ ಗೋಚರಿಸುತ್ತವೆ. ಮೇಲ್ಭಾಗದಲ್ಲಿ ಶಿವಲಿಂಗ, ಇಕ್ಕೆಲಗಳಲ್ಲಿ ಸೂರ್ಯ-ಚಂದ್ರ, ರಾಜಕತ್ತಿ, ನಂದಾದೀಪ ಮತ್ತು ನಂದಿಯ ಉಬ್ಬು ಕೆತ್ತನೆ ಇದೆ. 1266ನೇ ತಾರಣ ಸಂವತ್ಸರದ ಶ್ರಾವನ ಬಹುಳ 13, ಸಿಂಹ ಮಾಸ, ವಡ್ಡವಾರ (ಗುರುವಾರ) ಎಂಬ ಕಲಮಾನದ ಉಲ್ಲೇಖವಿದೆ. ಶಾಸನದಲ್ಲಿ ಆಳುಪ ದೊರೆ ವೀರಪಾಂಡ್ಯ ದೇವನನ್ನು ಶ್ರಿ ಪಾಂಡ್ಯ ಚಕ್ರವರ್ತಿ, ಯರಿರಾಯ ಬಸವಸಂಕರ, ರಾಯಗಜಾಂಕುಸ’ ಎಂಬ ಬಿರುದು ಇರುವುದನ್ನೂ ಉಲ್ಲೇಖಿಸಲಾಗಿದೆ.

    ಈ ದೇವಸ್ಥಾನದ ಕುರಿತು ಅಷ್ಟಮಂಗಲ ಪ್ರಶ್ನೆ ಕೇಳಿದಾಗ, ಹಿಂದೆ ಋಷಿ-ಮುನಿಗಳು ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡು ಶಿವಲಿಂಗ ಸ್ಥಾಪನೆ ಮಾಡಿದ ಜಾಗವಾಗಿದೆ. ಆ ಸಂದರ್ಭದಲ್ಲಿ ಇಲ್ಲಿ ಶೈವ ಪರಂಪರೆ ನೆಲಿಸಿದ್ದು, ಈ ಕ್ಷೇತ್ರವು ಶೃಂಗೇರಿ ಶಾರದಾ ಪೀಠದೊಂದಿಗೆ ಸಂಬಂಧ ಹೊಂದಿತ್ತು ಎನ್ನಲಾಗಿದೆ. ಕಾಲಕ್ರಮೇಣ ಆಳ್ವಿಕೆ ನಡೆಸಿದ ಇತರ ರಾಜ ಪರಂಪರೆಯವರು ಇಲ್ಲಿ ವಿಷ್ಣುವಿನ ಆರಾಧನೆ ಆರಂಭಿಸಿದರು ಎನ್ನಲಾಗುತ್ತದೆ. ಆದರೆ, ಈ ಕುರಿತು ಯಾವುದೇ ದಾಖಲಾತಿ ಇಲ್ಲ. ಇದೀಗ ಶೃಂಗೇರಿ ಶ್ರೀಗಳ ಮಾರ್ಗದರ್ಶನದಲ್ಲಿ ದೇಗುಲದ ಜೀರ್ಣೋದ್ಧಾರ ಕೈಗೊಂಡಿದ್ದೇವೆ. ಅಯೋಧ್ಯಾ ಮಂದಿರ ಲೋಕಾರ್ಪಣೆ ಬಳಿಕ ಇಲ್ಲಿನ ವಿಷ್ಣು ದೇವರ ವಿಗ್ರಹದ ರೂಪ ಮತ್ತೊಮ್ಮೆ ಪ್ರಚಲಿತಕ್ಕೆ ಬರುವಂತಾಗಿದೆ.
    -ಗೋಪಾಲಕೃಷ್ಣ ಸಕ್ಕಟ್ಟು.
    ಮೊಕ್ತೇಸರ, ವಿಷ್ಣುಮೂರ್ತಿ ದೇವಸ್ಥಾನ, ಸಕ್ಕಟ್ಟು

    ಅಯೋಧ್ಯಾ ರಾಮಲಲ್ಲಾನನ್ನೇ ಹೋಲುವ ವಿಗ್ರಹ: ಸಕ್ಕಟ್ಟು ವಿಷ್ಣುಮೂರ್ತಿ ಬಿಂಬ ಸಕತ್ ವೈರಲ್


    ಅಯೋಧ್ಯಾ ರಾಮಲಲ್ಲಾನನ್ನೇ ಹೋಲುವ ವಿಗ್ರಹ: ಸಕ್ಕಟ್ಟು ವಿಷ್ಣುಮೂರ್ತಿ ಬಿಂಬ ಸಕತ್ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts