More

    ದೇವಸ್ಥಾನದ ನೀರಿನ ಟ್ಯಾಂಕ್ ಒಡೆದು ಮೈಮೇಲೆ ಬಿದ್ದು ಮಹಿಳೆ ಸಾವು: ವಾರ್ಷಿಕ ಮಾರಿಪೂಜೆ ವೇಳೆ ಸಂಭವಿಸಿದ ದುರಂತ

    ಕಾರ್ಕಳ: ಮಾರಿಪೂಜೆ ನಡೆಯುತ್ತಿದ್ದ ದೇವಸ್ಥಾನದ ನೀರಿನ ಟಾಂಕ್ ಕುಸಿದು ಮೈಮೇಲೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟು ಮಗಳು ಗಂಭೀರವಾಗಿ ಗಾಯಗೊಂಡ ಘಟನೆ ನಂದಳಿಕೆ ಗ್ರಾಮದ ಮಾವಿನಕಟ್ಟೆಯಲ್ಲಿ ಮಂಗಳವಾರ ಸಂಭವಿಸಿದೆ.

    ನಂದಳಿಕೆ ಗ್ರಾಮದ ಮಾವಿನಕಟ್ಟೆಯ ಪುನೀತ್ ಎಂಬುವರ ತಾಯಿ ಲತಾ ಮೊಯ್ಲಿ(50) ಮತ್ತು ತಂಗಿ ಪೂಜಾ ಮಂಗಳವಾರ ರಾತ್ರಿ ಮನೆಯ ಬಳಿಯಿರುವ ಮಹಮ್ಮಾಯಿ ದೇವಸ್ಥಾನ ವರ್ಷಾವಧಿ ಮಾರಿಪೂಜೆಗೆ ಹೋಗಿದ್ದರು. ರಾತ್ರಿ 10.30ರ ವೇಳೆಗೆ ಮಾರಿಪೂಜೆಯ ಅನ್ನದಾನದಲ್ಲಿ ಊಟ ಮಾಡಿ ಬಟ್ಟಲು ತೊಳೆಯಲು ದೇವಸ್ಥಾನದ ಹಿಂಭಾಗದಲ್ಲಿ ವ್ಯವಸ್ಥೆ ಮಾಡಿದ್ದ ನಳ್ಳಿ ಹತ್ತಿರ ಹೋದಾಗ ಸಮೀಪದಲ್ಲೇ ಎತ್ತರದಲ್ಲಿದ್ದ ಸಿಮೆಂಟ್‌ನಿಂದ ನಿರ್ಮಿಸಿದ ನೀರಿನ ಟಾಂಕಿ ಏಕಾಏಕಿ ಒಡೆದು ಮೈಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡ ಲತಾ ಮೊಯ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲು ಅಂಬುಲೆನ್ಸ್‌ನಲ್ಲಿ ಕುಳ್ಳಿರಿಸುವಾಗಲೇ ಮೃತಪಟ್ಟಿದ್ದಾರೆ.

    ಗರ್ಭಿಣಿ ಮಗಳಿಗೂ ಗಾಯ

    ಗರ್ಭಿಣಿಯಾಗಿರುವ ಲತಾ ಅವರ ಮಗಳು ಪೂಜಾ ಗಾಯಗೊಂಡಿದ್ದು, ಅವರು ಕಾರ್ಕಳದ ಟಿ.ಎಂ.ಎ.ಪೈ.ರೋಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಟ್ಯಾಂಕ್ನ ಕಲ್ಲಿನಡಿ ಸಿಲುಕಿದ ಮಹಿಳೆ

    ಸಿಮೆಂಟ್ ಟ್ಯಾಂಕ್ ಒಡೆದು ಎರಡೂ ಬದಿಯ ಗೋಡೆಯ ಕಲ್ಲುಗಳು ಉರುಳಿದ್ದು ಮಹಿಳೆ ಕಲ್ಲಿನಡಿಯಲ್ಲಿ ಸಿಲುಕಿಕೊಂಡಿದ್ದು ಬಳಿಕ ನೆರೆದಿದ್ದ ಜನ ಮಹಿಳೆಯನ್ನು ಹೊರ ತೆಗೆಯಲು ಹರಸಾಹಸ ಪಟ್ಟು ರಕ್ಷಿಸುವ ಪ್ರಯತ್ನ ನಡೆಸಿದರೂ ಪ್ರಯೋಜವಾಗಿಲ್ಲ.

    ಕಾಂಕ್ರೀಟಿನ ಟ್ಯಾಂಕ್ ಸಿಡಿದಂತೆ ಒಡೆಯಿತು

    ದೇವಸ್ಥಾನದ ಹಿಂಭಾಗದಲ್ಲಿ ಕಾಂಕ್ರೀಟಿನಿಂದ ಟ್ಯಾಂಕ್ ನಿರ್ಮಿಸಲಾಗಿತ್ತು. ರಾತ್ರಿ ಅನ್ನದಾನ ಮುಕ್ತಾಯದ ಹಂತದಲ್ಲಿರುವಾಗ ಬಟ್ಟಲು ಮತ್ತು ಪಾತ್ರೆಗಳನ್ನು ತೊಳೆಯಲು ಟ್ಯಾಂಕಿಗೆ ನೀರು ತುಂಬಿಸುವಾಗ ಟ್ಯಾಂಕ್ ಸಿಡಿದಂತೆ ಒಡೆದಿದೆ. ಅಲ್ಲೇ ಕೈ ತೊಳೆಯುತ್ತಿದ್ದ ಲತಾ ಅವರ ಮೈಮೇಲೆ ಬಿದ್ದಿದೆ.

    ತಪ್ಪಿದ ಭಾರಿ ಅನಾಹುತ

    ಮಾರಿಪೂಜೆಯಲ್ಲಿ ಜನರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಮಂದಿ ಅನ್ನಪ್ರಸಾದ ಸ್ವೀಕರಿಸಿ ತೆರಳಿದ್ದರು. ಅನ್ನಸಂತರ್ಪಣೆಗೆ ಉಪಯೋಗಿಸಿದ ಪಾತ್ರೆಗಳನ್ನು ತೊಳೆಯಲು ಟ್ಯಾಂಕ್ ಕೆಳಭಾಗದಲ್ಲಿ ಮಹಿಳೆಯರು ಸಿದ್ಧತೆ ಮಾಡುತ್ತಿದ್ದರು. ಒಂದು ವೇಳೆ ಟ್ಯಾಂಕ್ ಒಡೆದಾಗ ಮಹಿಳೆಯರು ಪಾತ್ರೆ ತೊಳೆಯುತ್ತಿದ್ದರೆ ಹೆಚ್ಚಿನ ಅನಾಹುತ ನಡೆಯುತ್ತಿತ್ತು. ಭಾರಿ ದೊಡ್ಡ ಅನಾಹುತವೊಂದು ತಪ್ಪಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಅನೇಕ ಸಾವು-ನೋವು

    ಮಾವಿನಕಟ್ಟೆ ಪರಿಸರದಲ್ಲಿ ಹಲವು ವರ್ಷಗಳಿಂದ ಅನೇಕ ಸಾವು ನೋವುಗಳು ಸಂಭವಿಸುತ್ತಿವೆ. ಕೆಲವು ವರ್ಷಗಳ ಹಿಂದೆ ಇದೇ ಪರಿಸರದ ಮೈದಾನದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದಾಗ ಯುವಕನೊಬ್ಬ ಕುಸಿದು ಬಿದ್ದು ಮೃತಪಟ್ಟಿದ್ದ. ಇದರ ಪಕ್ಕದಲ್ಲೇ ಹಾದುಹೋಗುವ ಕಾರ್ಕಳ-ಪಡುಬಿದ್ರೆ ಹೆದ್ದಾರಿಯಲ್ಲಿ ಅನೇಕ ಅಪಘಾತಗಳು ನಡೆಯುತ್ತಿವೆ. ಈ ಹಿಂದೆ ಬೈಕ್ ಹಾಗೂ ಕಾರು ಡಿಕ್ಕಿಯಾಗಿ ಅಣ್ಣ-ತಮ್ಮಂದಿರು ಮೃತರಾಗಿದ್ದರು. ಇತ್ತೀಚೆಗಷ್ಟೆ ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಅತ್ತೂರು ಚರ್ಚ್ ಹಬ್ಬಕ್ಕೆ ಬರುತ್ತಿದ್ದ ಮಹಿಳೆ ಮೃತಪಟ್ಟಿದರು.

    ದೇವಿ ಮುನಿಸಿಕೊಂಡಳೇ…?

    ಮಾರಿಪೂಜೆಯ ಸಂದರ್ಭ ದರ್ಶನ ಸೇವೆ ನಡೆದಿದ್ದು ದೇವಿ ಸನ್ನಿಧಿಯಲ್ಲಿ ರಕ್ತಾಹಾರ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಹರಕೆಯ ಮಾರಿಪೂಜೆಯಾದರೂ ಆಗಬೇಕು ಎಂದು ದೇವಿ ಅಪ್ಪಣೆ ನೀಡಿದ್ದು ಇದಕ್ಕೆ ಭಕ್ತರು ಒಪ್ಪಿದ್ದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಯಾರೂ ಊಹಿಸದ ಅವಘಡ ನಡೆದಿದ್ದು ಇದರಿಂದ ಗ್ರಾಮದ ಜನ ಬೆಚ್ಚಿ ಬಿದ್ದಿದ್ದಾರೆ. ದೇವಸ್ಥಾನದಲ್ಲೇ ಸಾವು ಸಂಭವಿಸಿರುವುದು ನಾನಾ ಊಹಾಪೋಹಗಳಿಗೆ ಕಾರಣವಾಗಿದೆ. ಈ ರೀತಿ ಅನೇಕ ಸಾವು ನೋವುಗಳು ಪರಿಸರದಲ್ಲಿ ನಡೆಯುತ್ತಿದ್ದು ದೇವಿ ಮುನಿಸಿಕೊಂಡಳೇ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಅಥವಾ ಇನ್ನೇನಾದರೂ ಕಾರಣವಿದ್ದರೆ ಅದಕ್ಕೆ ಪ್ರಶ್ನೆಯಿಟ್ಟು ಪರಿಹಾರ ಕಂಡುಕೊಳ್ಳಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts