More

    ಶಿವ-ಪಾರ್ವತಿ ಜಲಕ್ರೀಡೆಯಾಡಿದ ಕೆರೆ ಶಿಥಿಲ: ಕಣ್ವಮುನಿಯ ಹೊಸಾಡುವಿನ ಕಡುಕೆರೆಗೆ ಕಾಯಕಲ್ಪದ ನಿರೀಕ್ಷೆ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಸಾಡು ಗ್ರಾಮ ಪಂಚಾಯಿತಿಯಲ್ಲಿ ಇರುವ ವಿಶಾಲ ಕಡುಕೆರೆ ನಿರ್ವಹಣೆ ಕೊರತೆಯಿಂದಾಗಿ ನಿಧಾನವಾಗಿ ಕರಗುತ್ತಿದೆ. 2 ಸಾವಿರ ಎಕರೆ ಕೃಷಿ ಪ್ರದೇಶಕ್ಕೆ ನೀರುಣಿಸುವ ಕೆರೆಯ ದಂಡೆ ಸೋರತೊಡಗಿದ್ದು, ನೀರು ಬತ್ತುತ್ತಿದೆ. ಕೆರೆ ದಂಡೆ ಶಿಥಿಲವಾಗಿದೆ. ಹೀಗಾಗಿ ಮಳೆಗಾಲದಲ್ಲಿ ಏನು ಆಪತ್ತು ಕಾದಿದೆಯೋ ಎನ್ನುವ ಆತಂಕ ಕೃಷಿಕರಲ್ಲಿ ಇದೆ.

    ಶಿವ-ಪಾರ್ವತಿ ಜಲಕ್ರೀಡೆಯಾಡಿದ ಕೆರೆ

    ರಾತ್ರಿ ಬೆಳಗಾಗುವುದರೊಳಗೆ ಸೃಷ್ಟಿಯಾದ ಈ ಕೆರೆಯಲ್ಲಿ ಶಿವ ಪತ್ನಿ ಸಮೇತ ಜಲಕ್ರೀಡೆಯಾಡಿದ, ಕಣ್ವಮುನಿ ಕೆರೆಯ ಸೌಂದರ್ಯಕ್ಕೆ ಮನಸೋತು ದೇವರ ಅಭಿಷೇಕಕ್ಕೆ ಇದರ ನೀರು ಉಪಯೋಗಿಸಿದ್ದರಿಂದ ಕಣ್ವತೀರ್ಥ ಎಂಬ ಹೆಸರು ಬಂತು ಎಂಬ ಪೌರಾಣಿಕ ಹಿನ್ನೆಲೆ ಈ ಕೆರೆಗಿದೆ.

    ಕೆರೆ ಒತ್ತುವರಿಯಿಂದ ತೊಂದರೆ

    ಕೆರೆ ಮೇಲ್ಬಾಗದಲ್ಲಿ ಕಟ್ಟಡಗಳ ತಲೆ ಎತ್ತಿದ್ದು, ಬೆಟ್ಟ ಅಗೆದ ಮಣ್ಣು ಕೆರೆಯ ಒಡಲು ಸೇರುತ್ತಿದೆ. ಕೆರೆ ಒತ್ತುವರಿ ವಿರೋಧಿಸಿ ಜನ ಪ್ರತಿಭಟಿಸಿದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಪ್ರತಿಷ್ಠತರನ್ನು ಹಾಕಿಕೊಳ್ಳುವುದಕ್ಕೆ ಧೈರ್ಯವಿಲ್ಲದೆ ಸುಮ್ಮನಾಗಿದ್ದಾರೆ. ಕಡುಕೆರೆಗೆ ಹೋಗಬೇಕಿದ್ದರೂ ಸರ್ಕಸ್ ಮಾಡಬೇಕು. ಕೆರೆ ಹೊಸಾಡು ಗ್ರಾಮದ ನೀರಿನ ಅಕ್ಷಯಪಾತ್ರೆ ಎನ್ನುವುದು ಸತ್ಯ.

    ಶಿವ-ಪಾರ್ವತಿ ಜಲಕ್ರೀಡೆಯಾಡಿದ ಕೆರೆ ಶಿಥಿಲ: ಕಣ್ವಮುನಿಯ ಹೊಸಾಡುವಿನ ಕಡುಕೆರೆಗೆ ಕಾಯಕಲ್ಪದ ನಿರೀಕ್ಷೆ

    ಕುಮಾರ್ ಬಂಗಾರಪ್ಪ ಕಾಲದಲ್ಲಿ ಕಾಯಕಲ್ಪ

    ಹಿಂದೆ ನೀರಾವರಿ ಸಚಿವ ಕುಮಾರ್ ಬಂಗಾರಪ್ಪ ಕಾಲದಲ್ಲಿ ರೈತ ಕಾಯಕ ಯೋಜನೆಯಡಿಯಲ್ಲಿ ಕಡುಕೆರೆ 10 ಲಕ್ಷ ರೂ. ವೆಚ್ಚದಲ್ಲಿ ಕಾಯಕಲ್ಪ ಮಾಡಲಾಗಿತ್ತು. ಕೆರೆದಂಡೆಗೆ ಕಟ್ಟಿದ ಶಿಲೆಕಲ್ಲು ಕೆರೆ ಪಾದ ಸೇರುತ್ತಿದ್ದು, ಅಲ್ಲಲ್ಲಿ ಮಣ್ಣಿನ ಸವಕಳಿ ಕಣ್ಣಿಗೆ ರಾಚುತ್ತಿದೆ. ಕೆರೆಯಲ್ಲಿ ಅಗಾಧ ಪ್ರಮಾಣದ ಹೂಳು ತುಂಬಿದೆ. ರೈತ ಕಾಯಕದಲ್ಲಿ ಅರೆಬರೆ ಹೂಳೆತ್ತಲಾಗಿತ್ತು. ಈಗ ಅಗಾಧ ಪ್ರಮಾಣದಲ್ಲಿ ಮತ್ತಷ್ಟು ಹೂಳು ಸಂಗ್ರಹವಾಗಿದೆ. ನೀರಿನ ಪ್ರಮಾಣ ಕಡಿಮೆಯಾಗಿ ಕುಡಿಯುವ ನೀರಿನ ಸಮಸ್ಯೆಗೆ ಕಾರಣವಾಗುತ್ತಿದೆ. ಪರಿಸರ ನಿವಾಸಿಗಳು, ಕೃಷಿಕರು ಮಾತ್ರ ಈಗಲೂ ಕಡುಕೆರೆ ಕಾಯಕಲ್ಪದ ಕನಸು ಕಾಣುತ್ತಿದ್ದಾರೆ.

    ಇಲ್ಲಿನ ಕೆರೆಯ ಹೂವು ಗುಹೇಶ್ವರನಿಗೆ

    ಕಡುಕೆರೆ ದೇವತೆಗಳ ಸೃಷ್ಟಿ ಎನ್ನುವ ಜಾನಪದ ನಂಬಿಕೆ ಇದೆ. ಹಿಂದೆ ಗುಹೇಶ್ವರ ದೇವಸ್ಥಾನಕ್ಕೆ ಹೋಗುವ ಭಕ್ತರು ಕಣ್ವಕೆರೆಯಲ್ಲಿ ಮಿಂದು ಕೆರೆಯ ಹೂ ತೆಗೆದುಕೊಂಡು ಹೋಗಿ ದೇವರಿಗೆ ಅರ್ಪಿಸುತ್ತಿದ್ದುದನ್ನು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಕೆರೆ ದಂಡೆಗೆ ಶಾಶ್ವತ ಪರಿಹಾರ ನೀಡಬೇಕು. ಕೆರೆ ದಂಡೆ ಎತ್ತರಿಸಿ ನೀರು ಶೇಖರಣೆಗೆ ಅನುಕೂಲ ಮಾಡಿಕೊಡಬೇಕು. ಅಳತೆ ಮಾಡಿ ಕೆರೆ ಒತ್ತುವರಿ ತೆರವು ಮಾಡಬೇಕು ಎಂದು ಪರಿಸರ ವಾಸಿಗಳು ಒತ್ತಾಯಿಸಿದ್ದಾರೆ.

    ಶಿವ-ಪಾರ್ವತಿ ಜಲಕ್ರೀಡೆಯಾಡಿದ ಕೆರೆ ಶಿಥಿಲ: ಕಣ್ವಮುನಿಯ ಹೊಸಾಡುವಿನ ಕಡುಕೆರೆಗೆ ಕಾಯಕಲ್ಪದ ನಿರೀಕ್ಷೆ

    ಸದ್ಬಳಕೆ, ಕಾಯಕಲ್ಪವಾಗಲಿ

    ಹೂಳೆತ್ತಿ, ರಿವಿಟ್ಮೆಂಟ್ ಕಟ್ಟಿ, ಬೋಟಿಂಗ್ ವ್ಯವಸ್ಥೆ, ಮೀನು ಸಾಕಣೆ, ಕೆರೆ ಸುತ್ತಾ ಉದ್ಯಾನವನ, ವಾಕಿಂಗ್ ಟ್ರಾಕ್ ನಿರ್ಮಿಸಿದರೆ ಕೆರೆಯ ಸದ್ಬಳಕೆ ಆಗುತ್ತದೆ. ಕೆರೆ ಒತ್ತುವರಿಯಿಂದ ಹೊಸಾಡು ಮತ್ತು ಅರಾಟೆ ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಎದುರಿಸುತ್ತದೆ. ರಾಜಕಾರಣಿಗಳಿಗೆ ಮತ ಬೇಕು ಪರಿಸರದ ಜನರ ಭಾವನೆ ಮಾತುಕೇಳೋದಕ್ಕೆ ಪುರುಸೊತ್ತಿಲ್ಲ ಎಂದು ಜನ ಹೇಳುತ್ತಿದ್ದಾರೆ.

    ಬೈಂದೂರು ಕ್ಷೇತ್ರದಲ್ಲಿ ಪೌರಾಣಿಕ ಹಿನ್ನೆಲೆ ಇರುವ 300 ಕೆರೆ ಗುರುತು ಮಾಡಿದ್ದು, ನರೇಗಾ ಮೂಲಕ ಅಭಿವೃದ್ಧಿ ಮಾಡುವ ಸಂಕಲ್ಪ ಮಾಡಿದ್ದೇನೆ. ಯಾರೇ ಕೆರೆ ಒತ್ತುವರಿ ಮಾಡಿಕೊಂಡಿರಲಿ, ಎಷ್ಟೇ ಬಲಿಷ್ಟರಾಗಿರಲಿ ತೆರವು ಮಾಡಿಸಲಾಗುತ್ತದೆ. ಕೆರೆ ಊರಿಗೆ ಹೆಮ್ಮೆಯಾಗಿದ್ದು, ಗೋಮಾಳ ಹಾಗೂ ಸ್ಮಶಾನದ ಬಗ್ಗೆ ಹೇಗೆ ಮುಂದಡಿಯಿಟ್ಟಿದ್ದೇವೆಯೋ ಹಾಗೆ ಒತ್ತುವರಿ ತೆರವು ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಕಡುಕೆರೆ ವಿಶಾಲ ಹಾಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪ್ರವಾಸ ಅಥವಾ ಮೀನು ಸಾಕಾಣಿಕೆ ವಾಣಿಜ್ಯ ಉದ್ದೇಶಕ್ಕೂ ಬಳಸುವ ಸಾಧ್ಯತೆ ಬಗ್ಗೆ ಪರಿಶೀಲಿಸಲಾಗುತ್ತದೆ.

    -ಗುರುರಾಜ್ ಗಂಟಿಹೊಳೆ , ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts