VIDEO| ಬಾಲಿವುಡ್​ ನಟ ನವಾಜುದ್ದೀನ್​ ಸಿದ್ಧೀಕಿ ಕೃಷಿ ಕೆಲಸ ಹೇಗಿದೆ ನೋಡಿ?

collage (20)
Published on

ಪತ್ನಿ ಜತೆಗಿನ ವಿಚ್ಛೇದನ ವಿಚಾರವಾಗಿ ನವಾಜುದ್ದೀನ್​ ಸಿದ್ಧೀಕಿ ಸುದ್ದಿಯಲ್ಲಿದ್ದರು. ಸಿಟಿ ಸಹವಾಸ ಸಾಕೆಂದು ಎಲ್ಲವನ್ನು ಬಿಟ್ಟು ಹುಟ್ಟೂರಿಗೆ ಹೊರಟರು. ಇದೀಗ ಹಚ್ಚ ಹಸಿರ ಭೂತಾಯಿಯ ಮಡಿಲಿಗಿಳಿದು ಕೃಷಿ ಮಾಡುತ್ತಿದ್ದಾರೆ. ಒತ್ತಡದ ಬದುಕು ಕೊಂಚ ನಿರಾಳವಾಗಿದೆ.

ಹೌದು, ನವಾಜುದ್ದೀನ್​ ಸದ್ಯ ಉತ್ತರ ಪ್ರದೇಶದಲ್ಲಿದ್ದಾರೆ. ಜಮೀನಿನಲ್ಲಿ ಎಳೆ ಸೂರ್ಯನ ಬಿಸಿಲಿಗೆ ಮೈವೊಡ್ಡಿ ಬೆವರಿಳಿಸುತ್ತಿದ್ದಾರೆ. ಎದೆ ಎತ್ತರಕ್ಕೆ ಬೆಳೆದು ನಿಂತ ಬೆಳೆಗೆ ನೀರಾಯಿಸುತ್ತಿದ್ದಾರೆ. ಅವರ ಈ ಒಕ್ಕಲುತನದ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿರುವ ನವಾಜ್​, ಇವತ್ತಿನ ಕೆಲಸ ಮುಗೀತು ಒಂದು ಬರೆದುಕೊಂಡಿದ್ದಾರೆ. ನವಾಜ್​ ಅವರ ಈ ಒಂದು ಪೋಸ್ಟ್ ಅಭಿಮಾನಿಗಳ ಮನಸೆಳೆದಿದೆ. ನೆಟ್ಟಿಗರು ಅವರ ಈ ಸರಳತೆಗೆ ಜೈ ಎನ್ನುತ್ತಿದ್ದಾರೆ. ಸರಳತೆಗೆ ಇನ್ನೊಂದು ಹೆಸರೇ ನವಾಜ್​. ನೀವೇ ನಮಗೆಲ್ಲ ಸ್ಫೂರ್ತಿ, ಎಂದೆಲ್ಲ ಕಮೆಂಟ್​ ಮಾಡುತ್ತಿದ್ದಾರೆ.

ಈ ಹಿಂದೆ ಕೃಷಿ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ನವಾಜ್​ ಈ ರೀತಿಯ ಉತ್ತರ ನೀಡಿದ್ದರು. ನಾನು ನನ್ನ ಮೋಕ್ಷ ಅಥವಾ ಮುಕ್ತಿಯನ್ನು ನನ್ನ ಭೂಮಿಯಲ್ಲಿಯೇ ಕಂಡಿದ್ದೇನೆ. ಬಹುತೇಕ ಜನರು ಆಶ್ರಮ ಅದೂ ಇದೂ ಎಂದೆಲ್ಲ ಅಲೆದಾಡುತ್ತಾರೆ. ಆದರೆ ನಾನು ಮಾತ್ರ ನನ್ನ ಬೇರುಗಳತ್ತ ಮರಳುತ್ತೇನೆ. ನನ್ನ ಜೀವನದ ಅರ್ಧ ಆಯಸ್ಸನ್ನು ಅದೇ ಮಣ್ಣಿನಲ್ಲೇ ಕಳೆದಿದ್ದೇನೆ. ಲೆಕ್ಕವಿಲ್ಲದಷ್ಟು ಕಬ್ಬು ತಿಂದಿದ್ದೇನೆ. ಟ್ರ್ಯಾಕ್ಟರ್ ಓಡಿಸಿದ್ದೇನೆ. ಬಾಲ್ಯದ ಗೆಳೆಯರೊಂದಿಗೆ ಸಮಯ ಕಳೆದಿದ್ದೇನೆ’ ಎಂದು ಹಳೇ ದಿನಗಳನ್ನು ಮೆಲುಕು ಹಾಕಿದ್ದರು.

ಇದೀಗ ಅದೇ ಭೂಮಿಯಲ್ಲಿ ನವಾಜ್​ ಕೃಷಿ ಮಾಡುತ್ತಿದ್ದು, ಹಳೇ ದಿನಗಳತ್ತ ಹೊರಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net