

ಲಾಹೋರ್: ಭಾರತದ ವಿದೇಶಾಂಗ ಸಚಿವ ಜೈಶಂಕರ್ (Jaishankar) ಇಸ್ಲಮಾಬಾದ್ಗೆ (Islamabad) ಭೇಟಿ ನೀಡಿದ್ದು, ಒಳ್ಳೆಯ ಬೆಳವಣಿಗೆಯಾಗಿದ್ದು, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟನ್ನು ಕೊನೆಗಾಣಿಸಲು ಇದು ಉತ್ತಮ ನಡೆಯಾಗಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ (Nawaz Sharif) ಅಭಿಪ್ರಾಯಪಟ್ಟಿದ್ದಾರೆ.
SCO ಶೃಂಗಸಭೆಯಲ್ಲಿ ಭಾಗಿಯಾಗಲು ಇಸ್ಲಮಾಬಾದ್ಗೆ ತೆರಳಿದ್ದ ಜೈಶಂಕರ್ (Jaishankar) ಕಳೆದ 09 ವರ್ಷಗಳಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಮೊದಲ ವಿದೇಶಾಂಗ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈ ಕುರಿತು ಮಾತನಾಡಿರುವ ಮಾಜಿ ಪ್ರಧಾನಿ ನವಾಜ್ ಷರೀಫ್ (Nawaz Sharif) ಎರಡೂ ಕಡೆಯಿಂದ ಕೊರತೆಗಳಿವೆ. ಆದರೆ, ಸ್ನೇಹಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ನವಾಜ್ ಷರೀಫ್ (Nawaz Sharif), ಭಾರತ-ಪಾಕಿಸ್ತಾನ (India-Pakistan) ಈಗಾಗಲೇ 75 ವರ್ಷಗಳನ್ನು ವ್ಯರ್ಥ ಮಾಡಿವೆ, ಮುಂದಿನ 75 ವರ್ಷಗಳು ಹೀಗಾಗದಿರಲಿ. ಎರಡೂ ಕಡೆಯಿಂದ ಕೊರತೆಗಳಿವೆ. ಆದರೆ, ಸ್ನೇಹಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲ. ಇದು ಆರಂಭವಷ್ಟೇ. ಭಾರತ ಮತ್ತು ಪಾಕಿಸ್ತಾನ ಹಿಂದಿನದನ್ನು ಬಿಟ್ಟು ಭವಿಷ್ಯದ ಬಗ್ಗೆ ಯೋಚಿಸುತ್ತವೆ ಎನ್ನುವ ನಂಬಿಕೆ ಇದೆ. ಪ್ರಧಾನಿ ಮೋದಿ ಇಲ್ಲಿಗೆ ಬರಬೇಕೆಂದು ಬಯಸಿದ್ದೆ, ವಿದೇಶಾಂಗ ಸಚಿವ ಜೈಶಂಕರ್ ಇಲ್ಲಿಗೆ ಬಂದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿರುವುದು ನಮಗೆ ಸಂತಸ ತಂದಿದೆ.
ವಿವಾದವನ್ನು ಬದಿಗಿಟ್ಟು ಸಕಾರಾತ್ಮಕ ಅಂಶಗಳನ್ನು ಮಾತ್ರ ಪ್ರಸ್ತಾಪಿಸಿ, ನಾವು ಈಗ ಸಕಾರಾತ್ಮಕ ಹೆಜ್ಜೆಗಳನ್ನು ಇಡಬೇಕಾಗಿದೆ, ಹೊಸದೊಂದು ಪ್ರಾರಂಭವಾಗಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ಈಗ ವ್ಯಾಪಾರ, ಹವಾಮಾನ ಬದಲಾವಣೆ, ವ್ಯಾಪಾರ, ಉದ್ಯಮ, ಕ್ರೀಡೆ ಇತ್ಯಾದಿಗಳಲ್ಲಿ ಮುಂದುವರಿಯಬಹುದು ಎಂದು ನವಾಜ್ ಷರೀಫ್ ಹೇಳಿದರು. ವಾಜಪೇಯಿ ಅವರೊಂದಿಗಿನ ಅವರ ಭೇಟಿ ಮತ್ತು ಅವರಿಬ್ಬರೂ ಉತ್ತಮ ಬಾಂಧವ್ಯಕ್ಕೆ ಹೇಗೆ ಅಡಿಪಾಯ ಹಾಕಿದರು ಎಂಬುದನ್ನು ನಾನು ನೆನಪಿಸಿಕೊಳ್ಳುತ್ತೇನೆ.
ಕಳೆದ 75 ವರ್ಷಗಳು ಹೀಗೆಯೇ ಕಳೆದವು. ಇನ್ನು 75 ವರ್ಷ ವ್ಯರ್ಥ ಮಾಡಬೇಡಿ. ನಾವು ಯಾವುದೇ ಕಾರಣಕ್ಕೂ ಉಭಯ ದೇಶಗಳ ನಡುವಿನ ಸಂಬಂಧವನ್ನು ಹಳಿ ತಪ್ಪಲು ಬಿಡಬಾರದು. ನಮ್ಮ ಆರಂಭದ ಎಳೆಗಳನ್ನು ಬಿಡಬಾರದು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ (Nawaz Sharif) ಹೇಳಿದ್ದಾರೆ.