

Weight Loss: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗು ಸಿಧು, ಕಳೆದ ಐದು ತಿಂಗಳಿನಿಂದ ನಿರಂತರವಾಗಿ ಶಿಸ್ತಿನ ಆಹಾರ ಕ್ರಮ ಮತ್ತು ವ್ಯಾಯಾಮದಿಂದ 33 ಕೆಜಿ ತೂಕ ಇಳಿಕೆ ಮಾಡಿಕೊಂಡಿರುವುದು ಇದೀಗ ಹಲವರಲ್ಲಿ ಭಾರೀ ಅಚ್ಚರಿ ಮೂಡಿಸಿದೆ. ಐದು ತಿಂಗಳಲ್ಲಿ 33 ಕೆಜಿ ತೂಕ ಇಳಿಸಿಕೊಂಡಿರುವ ಫೋಟೋವನ್ನು ಸಿಧು, ತಮ್ಮ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೆಟ್ಟಿಗರ ಹುಬ್ಬೇರಿಸಿದೆ.
ಅಧಿಕ ತೂಕದಿಂದ ಬಳಲುತ್ತಿದ್ದ ನವಜೋತ್ ಸಿಂಗು ಸಿಧು, ಪ್ರಾಣಾಯಾಮ ಮತ್ತು ನಿಯಮಿತ ಆಹಾರ ಕ್ರಮದಿಂದ ಕೇವಲ ಐದು ತಿಂಗಳ ಅವಧಿಯಲ್ಲಿ ಬರೋಬ್ಬರಿ 33 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಈ ಕುರಿತು ಸಂತಸ ಹಂಚಿಕೊಂಡಿರುವ ಸಿಧು, ತೂಕ ಕಡಿಮೆ ಮಾಡಿಕೊಳ್ಳುವ ಮುನ್ನ ತೆಗೆಸಿಕೊಂಡ ಫೋಟೋ ಹಾಗೂ 33 ಕೆಜಿ ಕಡಿಮೆಯಾದ ಬಳಿಕ ಕ್ಲಿಕ್ಕಿಸಿಕೊಂಡ ಫೋಟೋವನ್ನು ತಮ್ಮ ಅಭಿಮಾನಿ ಹಾಗೂ ಅನುಯಾಯಿಗಳೊಂದಿಗೆ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
"ಇದೆಲ್ಲವೂ ಕೇವಲ ಇಚ್ಛಾಶಕ್ತಿ, ದೃಢನಿಶ್ಚಯ, ಆಹಾರ ಹಾಗೂ ವ್ಯಾಯಾಮ ಪ್ರಕ್ರಿಯೆ ಮತ್ತು ಪ್ರಾಣಾಯಾಮ, ತೂಕ ತರಬೇತಿ, ದೀರ್ಘ ವಾಕಿಂಗ್, ಶಿಸ್ತು, ಬದ್ಧತೆಯಿಂದ ಸಾಧ್ಯವಾಯಿತು. ನಮ್ಮ ಜೀವನದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಯುವಕರೇ ನೀವು ಕೂಡ ಆರೋಗ್ಯಕರ ದೇಹವನ್ನು ಹೊಂದುವುದು ಒಳ್ಳೆಯದು. ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳುವುದು ಒಂದು ಆರ್ಶೀವಾದವೇ ಸರಿ" ಎಂದು ಬರೆದು, ಫೋಟೋ ಹಂಚಿಕೊಂಡಿದ್ದಾರೆ.
ಕಳೆದ ವರ್ಷ ನವೆಂಬರ್ನಲ್ಲಿ ತಮ್ಮ ಧರ್ಮಪತ್ನಿ ನವಜೋತ್ ಕೌರ್ ಸಿಧುಗೆ ಸ್ತನ ಕ್ಯಾನ್ಸರ್ ಇರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಸಿಧು, "ಪತ್ನಿಗೆ ಸ್ತನ ಕ್ಯಾನ್ಸರ್ ಪತ್ತೆಯಾಗಿ, ಅದು ನಾಲ್ಕನೇ ಹಂತದ ಕ್ಯಾನ್ಸರ್ಗೆ ತಿರುಗಿತ್ತು. ವೈದ್ಯರ ಬಳಿ ಪರಿಶೀಲನೆ ಮಾಡಿಸಿದಾಗ, ಆಕೆ ಬದುಕುವುದು ಅನುಮಾನ. ಬದುಕುಳಿಯುವ ಸಾಧ್ಯತೆ ಶೇ.3ರಷ್ಟು ಮಾತ್ರವಿದೆ ಎಂದಿದ್ದರು. ಕೇವಲ 40 ದಿನಗಳಲ್ಲಿ ಆಕೆ ತೆಗೆದುಕೊಂಡ ನಿಂಬೆ, ಬೇವು, ಹಸಿ ಹರಿಶಿಣ, ಶುಂಠಿ ಡಯಟ್ ಕ್ರಮವೇ ಕ್ಯಾನ್ಸರ್ನಿಂದ ಬದುಕುಳಿಸಿತು" ಎಂದು ಹೇಳಿಕೆ ನೀಡಿದ್ದರು. ಈ ವಿಚಾರ ವೈದ್ಯ ಲೋಕಕ್ಕೆ ಸವಾಲಿನ ಪ್ರಶ್ನೆಯಾಗಿ ಕಾಡಿದ ಬೆನ್ನಲ್ಲೇ ವ್ಯಾಪಕ ವಿರೋಧಗಳು ವ್ಯಕ್ತವಾಯಿತು. ಅನೇಕ ಹಿರಿಯ ವೈದ್ಯರು ಸಿಧು ಹೇಳಿಕೆಯನ್ನು ಖಂಡಿಸಿ, ತಿರುಗೇಟು ನೀಡಿದರು. ಇದು ದೊಡ್ಡ ವಿವಾದಕ್ಕೂ ಕಾರಣವಾಗಿತ್ತು,(ಏಜೆನ್ಸೀಸ್).