

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿದ್ದ ಮಹತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ಆದಾಗಿನಿಂದ ನಿರಂತರವಾಗಿ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ನಟ ಪ್ರಕಾಶ್ ರಾಜ್ ಇಂದು ಮತ್ತೊಂದು ಹೇಳಿಕೆ ಮೂಲಕ ಗಮನ ಸೆಳೆದಿದ್ದಾರೆ.
ದೇಶದ ಹೆಸರನ್ನು ಇಂಡಿಯಾ ಬದಲಾಗಿ ಭಾರತ ಎಂದು ಬದಲಿಸುವ ಕುರಿತಂತೆ ಮಾತುಗಳು ಹೊರಬಿದ್ದಿರುವ ಹಿನ್ನೆಲೆಯಲ್ಲಿ ಇಂದು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿರುವ ಪ್ರಕಾಶ್ ರಾಜ್ ಪ್ರಶ್ನೆಯೊಂದನ್ನು ಕೇಳಿದ್ದಾರೆ. 'ಚುನಾವಣೆಯ ನಾಟಕಕ್ಕಾಗಿ ವೇಷಗಳನ್ನು.. ದೇಶದ ಹೆಸರನ್ನೂ ಬದಲಾಯಿಸುವ ವಿದೂಷಕ ಯಾರು?' ಎಂದು ಪ್ರಶ್ನಿಸಿರುವುದು ಅವರು ಇನ್ನೊಮ್ಮೆ ಭಾರಿ ಟ್ರೋಲ್ಗೆ ಒಳಗಾಗುವ ಲಕ್ಷಣ ಗೋಚರಿಸಿದೆ.
ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ವೇಳೆ ಚಂದ್ರನಿಂದ ಬಂದ ಮೊದಲ ಫೋಟೋ ಎಂದು ವಿರೂಪಗೊಳಿಸಿದ್ದ ಚಾಯ್ವಾಲ್ ಫೋಟೋ ಪೋಸ್ಟ್ ಮಾಡಿ ಪ್ರಕಾಶ್ ರಾಜ್ ವಿವಾದಕ್ಕೆ ಒಳಗಾಗಿದ್ದರು. ಬಳಿಕ ಅದನ್ನು ಸಮರ್ಥಿಸಿಕೊಂಡು ಮತ್ತೆ ಪುನಃ ಟ್ರೋಲ್ ಆಗಿದ್ದರು.
ಬಳಿಕ ತಮಿಳುನಾಡು ಸಚಿವ ಉದಯನಿಧಿ ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬೆನ್ನಿಗೇ 'ಹಿಂದೂಗಳು ತನಾತನಿಗಳು ಅಲ್ಲ, ತನಾತನಿಗಳು ಮಾನವವಿರೋಧಿಗಳು. ನೀವು ಇದನ್ನು ಒಪ್ಪಿದರೆ ರಿಟ್ವೀಟ್ ಮಾಡಿ, ಎಲ್ಲರಿಗೂ ಹ್ಯಾಪಿ ಸಂಡೇ' ಎಂದು ಪ್ರಕಾಶ್ ರಾಜ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ನಂತರ ಮೊನ್ನೆ ಸಾಧು-ಸಂತರನ್ನು ಗುರಿಯಾಗಿಸಿ ಇನ್ನೊಂದು ಪೋಸ್ಟ್ ಮಾಡಿದ್ದರು. ಇಂದು ಮತ್ತೆ ಒಂದು ವರ್ಗದವರನ್ನು ಕೆಣಕುವ ಪೋಸ್ಟ್ ಮಾಡಿದ್ದಾರೆ.