

ಕುಂದಾಪುರ: 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ವಿಜಯ ಯಾತ್ರೆ ಅಂಗವಾಗಿ ಗುರುವಾರ ಹುಟ್ಟೂರು ಉಡುಪಿ, ಮಣಿಪಾಲ, ಕುಂದಾಪುರದ ಚಿತ್ರಮಂದಿರಗಳಿಗೆ ನಾಯಕ ನಟ ರಕ್ಷಿತ್ ಶೆಟ್ಟಿ, ನಾಯಕಿ ರುಕ್ಮಿಣಿ ವಸಂತ್ ಹಾಗೂ ನಿರ್ದೇಶಕ ಹೇಮಂತ ರಾವ್ ಭೇಟಿ ನೀಡುತ್ತಿದ್ದಾರೆ.
ಈಗಾಗಲೇ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ಕ್ಲಾಸ್ ಲವ್ ಸ್ಟೋರಿ ಹೊತ್ತು ತಂದಿದ್ದು, ಎಲ್ಲಾ ಪ್ರೇಕ್ಷಕರ ಮನಸನ್ನು ಗೆದ್ದಿದೆ. ಪ್ರೇಕ್ಷಕರೊಂದಿಗೆ ಈ ಸಂತೋಷ ಹಂಚಿಕೊಳ್ಳಲು ಉಡುಪಿ ಅಲಂಕಾರ್ ಥಿಯೇಟರ್ಗೆ ಬೆಳಗ್ಗೆ 10:00 ರಿಂದ 12 ಗಂಟೆ ಶೋನಲ್ಲಿ ಭಾಗಿಯಾಗಲಿದ್ದಾರೆ. ಭರತ್ ಸಿನಿಮಾಸ್ನ 1:30ರ ಸಮಯದಲ್ಲಿ ಪ್ರೇಕರನ್ನು ಭೇಟಿ ಆಗಲಿದ್ದಾರೆ.
ಅಲ್ಲದೆ ಮಣಿಪಾಲ್ ಐನಾಕ್ಸ್ ಚಿತ್ರಮಂದಿರಕ್ಕೆ ಮಧ್ಯಾಹ್ನ 2:35ರ ಸುಮಾರಿಗೆ ಬರಲಿದ್ದಾರೆ. ಸಂಜೆ 4:20ಕ್ಕೆ ಕುಂದಾಪುರ ಭರತ್ ಸಿನಿಮಾಸ್ ಚಿತ್ರಮಂದಿರಕ್ಕೆ ಭೇಟಿ ನೀಡಿ ಪ್ರೇಕ್ಷಕರೊಂದಿಗೆ ಸಂತಸ ಹಂಚಿಕೊಳ್ಳಲಿದ್ದಾರೆ.
ಪ್ರತಿ ಸಿನಿಮಾ ರಿಲೀಸ್ ಆದಾಗಲೂ ನೇರವಾಗಿ ಪ್ರೇಕ್ಷಕರ ಹತ್ತಿರ ಬಂದು ತಮ್ಮ ಸಿನಿಮಾ ಬಗ್ಗೆ ಸಂವಾದ ನಡೆಸುವ ರಕ್ಷಿತ್ ಶೆಟ್ಟಿ, ಅವನೇ ಶ್ರೀಮನ್ನಾರಾಯಣ, 777 ಚಾರ್ಲಿ’ ಪ್ರದರ್ಶನದ ಸಂದರ್ಭದಲ್ಲೂ ರಾಜ್ಯಾದ್ಯಂತ ಸುತ್ತಿ ಜನರೊಂದಿಗೆ ಸಂವಾದ ನಡೆಸಿದ್ದರು. ಅದೇ ರೀತಿ ಈಗ ಹೊಸ ನಿರೂಪಣಾ ಶೈಲಿಯಲ್ಲಿ ಮೂಡಿ ಬಂದಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಮೂರನೇ ದಿನದ ವಿಜಯ ಯಾತ್ರೆಯ ಅಂಗವಾಗಿ ಉಡುಪಿ, ಮಣಿಪಾಲ, ಕುಂದಾಪುರಕ್ಕೆ ಬರಲಿದ್ದಾರೆ.
ಸದ್ಯ ಥಿಯೇಟರ್ನಲ್ಲಿ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಎ ವಿಶ್ವಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಮುಂದುವರಿದ ಭಾಗ ಸೈಡ್ ಬಿ ಅಕ್ಟೋಬರ್ 20ರಂದು ಬಿಡುಗಡೆ ಮಾಡುವುದಾಗಿ ತಂಡ ಈಗಾಗಲೇ ಘೋಷಣೆ ಮಾಡಿದೆ. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿ, ತಮ್ಮದೇ ಪರಂವಾಃ ಪಿಕ್ಚರ್ಸ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣ ಕೂಡ ಮಾಡಿದ್ದಾರೆ.
ಚಿತ್ರದಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್ ಅಭಿನಯ ಮಾಡಿದ್ದಾರೆ. ಚಿತ್ರದ ತಾರಾಗಣದಲ್ಲಿ ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರ ಲೋಕೇಶ್, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಇದ್ದಾರೆ.