

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಬಾಲಿವುಡ್ನ ಹುಳುಕುಗಳೆಲ್ಲಾ ಒಂದೊಂದಾಗಿ ಹೊರಬರುತ್ತಿದೆ. ಮೊದಲು ನೆಪೋಟಿಸಂ (ಸ್ವಜನಪಕ್ಷಪಾತ)ದಿಂದ ಶುರುವಾದ ಚರ್ಚೆ ಎಲ್ಲಿಂದ ಎಲ್ಲಿಗೋ ಹೋಗಿ ಬಿಟ್ಟಿದೆ. ಅದರಲ್ಲೂ ಕಂಗನಾ ರಣಾವತ್ ಅಂತೂ ನೆಪೋಟಿಸಂ, ಬಾಲಿವುಡ್ ಮಾಫಿಯಾ ಅಂತ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ.
ಈ ಕುರಿತು ಹಿರಿಯ ನಟ ನಾಸೀರುದ್ದೀನ್ ಷಾ, ಈ ಹಿಂದೆಯೇ ಕಿಡಿಕಾರಿದ್ದರು. ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಏನೇನೋ ಮಾತಾಡುವ ಮೂಲಕ ನಮ್ಮ ಮಾನವನ್ನು ನಾವೇ ಹಾರಜಿಗೆ ಇಡುತ್ತಿದ್ದೇವೆ ಎಂದು ಹೇಳಿದ್ದರು. ಈಗ ಮತ್ತೊಮ್ಮೆ ಷಾ, ಈ ವಿಷಯವಾಗಿ ಮಾತನಾಡಿದ್ದಾರೆ.
'ಯಾರ್ಯಾರಿಗೆ ಚಿತ್ರರಂಗದ ಬಗ್ಗೆ ಬೇಸರವಿತ್ತೋ, ಅವರೆಲ್ಲಾ ನಮ್ಮದೂ ಇರಲಿ ಎಂದು ಸುಶಾಂತ್ ಸಾವಿನ ನಂತರ ಮಾತನಾಡುತ್ತಿದ್ದಾರೆ. ಸುಶಾಂತ್ ಸಾವಿನ ಬಗ್ಗೆ ನನಗೆ ಅತೀವ ಬೇಸರವಿದೆ. ವೈಯಕ್ತಿಕವಾಗಿ ಆತನ ಪರಿಚಯವಿಲ್ಲದಿದ್ದರೂ, ಸಾವಿನ ಸುದ್ದಿ ಕೇಳಿ ಬೇಸರವಾಯಿತು. ಆತನಿಗೆ ಒಳ್ಳಿಯ ಭವಿಷ್ಯವಿತ್ತು. ಆತ ಹಾಗೆ ಮಾಡಿಕೊಳ್ಳಬಾರದಿತ್ತು. ಅದಾದ ಮೇಲೆ ಆಗಿದ್ದು ಇನ್ನೂ ವಿಚಿತ್ರವಾಗಿದೆ' ಎಂದು ಅವರು ಹೇಳಿದ್ದಾರೆ.
ನಿಮ್ಮ ದೂರುಗಳನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ. ಅದರ ಬಗ್ಗೆ ಯಾರಿಗೂ ಆಸಕ್ತಿ ಇಲ್ಲ ಎಂದಿರುವ ಅವರು, 'ಯಾರಿಗೂ ನಿಮ್ಮ ಅಭಿಪ್ರಾಯದ ಬಗ್ಗೆ ಆಸಕ್ತಿ ಇಲ್ಲ. ಅದ್ಯಾರೋ ಅರ್ಧಂಬರ್ಧ ತಿಳಿದುಕೊಂಡ ನಟಿ ಮಾತಾಡಿದಳು ಎಂದು ಎಲ್ಲರೂ ಅದೇ ಮಾತಾಡುತ್ತಿದ್ದಾರೆ. ನ್ಯಾಯ ಕೊಡಿಸುವುದಕ್ಕೆ ಆಕೆ ಯಾರು? ನ್ಯಾಯ ಸಿಗಬೇಕೆಂದಿದ್ದರೆ, ಖಂಡಿತಾ ಸಿಗುತ್ತಿದೆ. ನಮಗೆ ನಂಬಿಕೆ ಇರಬೇಕು. ಅದು ಬಿಟ್ಟು, ಸುಮ್ಮನೆ ಗೊತ್ತಿಲ್ಲದೆ ಮಾತನಾಡಬಾರದು' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಎಸ್ಪಿ ಬಾಲಸುಬ್ರಮಣ್ಯಂ ಆರೋಗ್ಯದಲ್ಲಿ ಚೇತರಿಕೆ
ಇನ್ನು ನೆಪೋಟಿಸಂ ಮತ್ತು ಹೊರಗಿನವರು-ಒಳಗಿನವರ ಚರ್ಚೆಯ ಬಗ್ಗೆ ಮಾತನಾಡಿರುವ ಅವರು, 'ನನಗೆ ಈ ವಿಷಯವೇ ಅರ್ಥವಾಗುವುದಿಲ್ಲ. ನಾನೊಬ್ಬ ನಟ. ನನ್ನ ಮಕ್ಕಳನ್ನು ಇದೇ ವೃತ್ತಿಯಲ್ಲಿ ನೋಡಬೇಕು ಎಂಉ ಯಾಕೆ ಆಸೆಪಡಬರದು. ಒಬ್ಬ ಉದ್ಯಮಿಯೋ, ಒಬ್ಬ ವಕೀಲನೋ ಅಥವಾ ಒಬ್ಬ ವೈದ್ಯನೋ ತನ್ನ ಮಗ ಅಥವಾ ಮಗಳು ತನ್ನ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗಲಿ ಎಂದು ಆಸೆಪಡುವುದಿಲ್ಲವಾ? ನಿಮ್ಮ ಪ್ರಕಾರ ನುಸ್ರತ್ ಅಲಿ ಖಾನ್ ಅವರ ಮಕ್ಕಳು ಹಾಡಬಾರದು ಎಂದರ್ಥವಾ? ಇದ್ಯಾವ ನ್ಯಾಯ?' ಎಂದು ಅವರು ಪ್ರಶ್ನಿಸಿದ್ದಾರೆ.
ಬಾಲಿವುಡ್ ಮಾಫಿಯಾ ಎನ್ನುವುದು ಇಲ್ಲೇ ಇಲ್ಲ ಎನ್ನುವ ಅವರು, 'ಇಷ್ಟು ವರ್ಷಗಳಿಂದ ಚಿತ್ರರಂಗದಲ್ಲಿದ್ದೀನಿ. ನನಗ್ಯಾವತ್ತೂ ಇದರ ಅನುಭವವಾಗಿಲ್ಲ. ಹಾಗೆಯೇ ಸಮಸ್ಯೆಯೂ ಆಗಿಲ್ಲ. ಯಾರೋ ನನಗೆ ಅನ್ಯಾಯ ಮಾಡುತ್ತಿದ್ದಾರೆ ಅಂತ ಅನಿಸಿಲ್ಲ. ಇದೆಲ್ಲಾ ಕೆಲವರ ಕಲ್ಪನೆ ಅಷ್ಟೇ. ಇಲ್ಲಿ ಮಾಫಿಯಾ ಎನ್ನುವುದಕ್ಕಿಂತ, ಯಾರಿಗೆ ಯಾರ ಜತೆಗೆ ಕೆಲಸ ಮಾಡಬೇಕು ಎಂದನಿಸುತ್ತದೋ ಅವರ ಜತೆಗೆ ಕೆಲಸ ಮಾಡುತ್ತಾರೆ. ಇದರಲ್ಲಿ ಸಮಸ್ಯೆ ಏನಿದೆ?' ಎಂದು ಪ್ರಶ್ನಿಸಿದ್ದಾರೆ ಷಾ.