

ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಗಾಯಕ ಎಸ್ಪಿ ಬಾಲಸುಬ್ರಮಣ್ಯಂ (74) ಆರೋಗ್ಯ ಸ್ಥಿತಿ ಇದೀಗ ಸುಧಾರಿಸಿದ್ದು, ಚೇತರಿಕೆ ಕಂಡುಬಂದಿದೆ. ಗುರುವಾರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಮಾಡಿ ವೆಂಟಿಲೇಟರ್ ಅಳವಡಿಸಲಾಗಿತ್ತು. ಇದೀಗ ವೆಂಟಿಲೇಟರ್ ಅಳವಡಿಕೆಯನ್ನು ತೆಗೆಯಲಾಗಿದೆ.
ಅಂದಹಾಗೆ, ಆಸ್ಪತ್ರೆ ವೈದ್ಯರಾಗಲಿ, ಎಸ್ಪಿಬಿ ಪುತ್ರನಾಗಲಿ ಅಧಿಕೃತವಾಗಿ ಈ ವಿಚಾರವನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಆದರೂ, ಅವರ ಆರೋಗ್ಯದ ಬಗ್ಗೆ ಒಂದಷ್ಟು ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವೆಂಟಿಲೇಟರ್ ಬಳಕೆ ಕೈಬಿಟ್ಟು ಅವರೇ ಉಸಿರಾಟ ನಡೆಸಿದ್ದಾರೆ ಎಂಬಂಥ ಸುದ್ದಿಗಳು ಹರಿದಾಡುತ್ತಿದ್ದು, ಅಭಿಮಾನಿಗಳು ಈ ಸುದ್ದಿ ಕೇಳಿ ಖುಷಿಯಲ್ಲಿದ್ದಾರೆ.
ಚೆನ್ನೈನ ಎಂಜಿಎಂ ಹೆಲ್ತ್ಕೇರ್ನಲ್ಲಿ ಆಗಸ್ಟ್ 5ರಂದು ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಎಸ್ಪಿಬಿ ಅವರನ್ನು ದಾಖಲಿಸಲಾಗಿತ್ತು. ಅಂದಿನಿಂದ ವಿಶೇಷ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಿರುವಾಗಲೇ ಗುರುವಾರ ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದರಿಂದ ಶುಕ್ರವಾರ ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಮಾಡಲಾಗಿತ್ತು. ಇದೀಗ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದು, ಸ್ಪಂದಿಸುತ್ತಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ. (ಏಜೆನ್ಸೀಸ್)