More

  ಒಕ್ಕಲಿಗರೆಲ್ಲರು ‘ನಾವಿಂದು ಕುವೆಂಪು ಪಕ್ಷದವರು’ ಎನ್ನಬೇಕು: ಪ್ರೊ.ಹಿ.ಚಿ.ಬೋರಲಿಂಗಯ್ಯ

  ಬೆಂಗಳೂರು: ‘ಗುಡಿಯಲ್ಲಿದ್ದ ದೇವರನ್ನು ಹೊರತಂದು ಪ್ರಕೃತಿಯಲ್ಲಿ ದೇವರನ್ನು ಕಾಣು’ ಎಂದಿರುವುದು ರಾಷ್ಟ್ರಕವಿ ಕುವೆಂಪು ಅವರು ಈ ನಾಡಿಗೆ ನೀಡಿದ ಬಹುದೊಡ್ಡ ಸಂದೇಶ ಎಂದು ಹಂಪಿಯ ಕನ್ನಡ ವಿವಿ ವಿಶ್ರಾಂತ ಕುಲಪತಿ ಪ್ರೊ.ಹಿ.ಚಿ.ಬೋರಲಿಂಗಯ್ಯ ಹೇಳಿದ್ದಾರೆ.

  ಕನ್ನಡ ಜನಶಕ್ತಿ ಕೇಂದ್ರ ಕನ್ನಡ ಭವನದ ನಯನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಡಾ. ಜಿ.ಕೃಷ್ಣಪ್ಪ ರಚನೆಯ ‘ನಮ್ಮ ಕುವೆಂಪು’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

  ಕುವೆಂಪು ಅವರ ಸಾಹಿತ್ಯ ಗಮನಿಸಿದರೆ, ಶ್ರೀಸಾಮಾನ್ಯನಲ್ಲಿ ದೇವರನ್ನು ಕಾಣಬೇಕೇ ಹೊರತು, ದೊಡ್ಡದೊಡ್ಡ ಮನುಷ್ಯರಲ್ಲಿ ಅಲ್ಲ. ‘ಶ್ರೀಸಾಮಾನ್ಯನೆ ಭಗವನ್​ ಮಾನ್ಯಂ.. ಶ್ರೀಸಾಮಾನ್ಯನೆ ಭಗವದ್​ ಧನ್ಯಂ.. ಸಾಮಾನ್ಯತೆ ಭಗವಂತನ ರೀತಿ.. ಸಾಮಾನ್ಯವೆ ದಿಟ ಭಗವತ್​ ಪ್ರೀತಿ’ ಎಂದಿದ್ದಾರೆ. ಈ ಸಂದೇಶ ಸರ್ವಕಾಲಕ್ಕೂ ಸಲ್ಲುವಂಥದ್ದು ಎಂದರು.

  ಸಮಾಜದಲ್ಲಿದ್ದ ಪುರೋಹಿತಶಾಹಿ ಹಾಗೂ ಮೂಢನಂಬಿಕೆ ವ್ಯವಸ್ಥೆಯ ವಿರುದ್ಧ ಪ್ರಖರ ಭಾಷೆಯಲ್ಲಿ ವಿರೋಧಿಸಿದವರಲ್ಲಿ ಕುವೆಂಪು ಪ್ರಮುಖರು. ತಮಗೆ ಬೇಕಾದಂತೆ ಪುರಾಣಗಳನ್ನು ವ್ಯವಸ್ಥಿತವಾಗಿ ಬರೆದುಕೊಂಡು, ಅಲ್ಲಿ ಕೇಳವರ್ಗದವರು ಯಾವುದಕ್ಕೂ ಅರ್ಹರಲ್ಲ ಎನ್ನುವಂತಿದ್ದ ವ್ಯವಸ್ಥೆಗೆ ಕುವೆಂಪು ದೊಡ್ಡ ‘ಚಿಕಿತ್ಸೆ’ ನೀಡಿದರು. ಸಮಾಜ ಮೊದಲಿನಿಂದಲೂ ಒಪ್ಪಿಕೊಂಡು ಬಂದಿದ್ದ ಹಲವು ಮೌಲ್ಯಗಳು ಮನುಷ್ಯಪರವಾಗಿರಲಿಲ್ಲ. ಅದು ಆಳುವ ಜಾತಿ ಹಾಗೂ ಮೇಲ್ವರ್ಗದವರ ಪರವಾಗಿದ್ದವು. ಅಂತಹದನ್ನು ಸಾಹಿತ್ಯದ ಮೂಲಕ ತಿದ್ದುವ ಕೆಲಸ ಮಾಡಿದರು ಎಂದು ಹೇಳಿದರು.

  ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಮಾತನಾಡಿ, ಹೊಸ ತಲೆಮಾರಿನ ಜನರು ಓದಿನ ಹವ್ಯಾಸದಿಂದ ದೂರ ಸರಿಯುತ್ತಿದ್ದಾರೆ. ಅವರ ಕೈಗೆ ಪುಸ್ತಕ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಸರಳ ಕನ್ನಡದಲ್ಲಿರುವ ಸಣ್ಣ ಸಣ್ಣ ಕೃತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿದರೆ ಅವರಲ್ಲಿ ಓದುವ ಅಭಿರುಚಿ ಮೂಡುತ್ತದೆ ಎಂದರು.

  ಕುಪ್ಪಳಿಯ ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್​ ಪ್ರಕಾಶ್​, ಲೇಖಕ ಡಾ. ಜಿ.ಕೃಷ್ಣಪ್ಪ, ಕನ್ನಡ ಜನಶಕ್ತಿ ಕೇಂದ್ರದ ಗೌರವ ಸಲಹೆಗಾರ ಪಿ.ಮಲ್ಲಿಕಾರ್ಜುನಪ್ಪ ಇದ್ದರು.

  ಇತ್ತೀಚೆಗೆ ಒಕ್ಕಲಿಗರನ್ನು ಯಾವ್ಯಾವುದೋ ರಾಜಕೀಯ ಪಕ್ಷಗಳು ‘ಗುತ್ತಿಗೆ ತೆಗೆದುಕೊಳ್ಳಲು’ ಮುಂದಾಗಿವೆ. ಯಾವ ಪಕ್ಷವೂ ಕೂಡ ಒಕ್ಕಲಿಗರಿಗಾಗಿ, ರೈತರಿಗಾಗಿ ಏನೂ ಮಾಡಿಲ್ಲ. ಹೀಗಿರುವಾಗ ಯಾರಾದರು ಪ್ರಶ್ನಿಸಿದರೆ ಒಕ್ಕಲಿಗರು ‘ನಾವಿಂದು ಕುವೆಂಪು ಪಕ್ಷದವರು’ ಎನ್ನಬೇಕು. ಕುವೆಂಪು ವಿಚಾರಧಾರೆ ಮಾತ್ರ ಒಕ್ಕಲಿಗರನ್ನು ವಿಶ್ವಮಾನವರನ್ನಾಗಿಸುತ್ತದೆ. ಕುವೆಂಪು ತತ್ವಾನುಷ್ಠಾನದಲ್ಲಿ ಬೆಳೆಯುತ್ತಿರುವ ಸಮಾಜ ಎಂದುಕೊಂಡು ಎಲ್ಲರೂ ಜತೆಯಾಗಿರಬೇಕೇ ಹೊರತು, ರಾಜಕೀಯ ಪಕ್ಷಗಳೊಂದಿಗಲ್ಲ.
  -ಪ್ರೊ.ಹಿ.ಚಿ.ಬೋರಲಿಂಗಯ್ಯ, ಕನ್ನಡ ವಿವಿ (ಹಂಪಿ) ವಿಶ್ರಾಂತ ಕುಲಪತಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts