

ಕೀರ್ತಿಪುರ: ಇಲ್ಲಿನ ತ್ರಿಭುವನ್ ಯುನಿವರ್ಸಿಟಿ ಅಂತರಾಷ್ಟ್ರೀತಯ ಕ್ರೀಡಾಂಗಣದಲ್ಲಿ ನಡೆದ ನೇಪಾಳ ಹಾಗೂ ನಮೀಬಿಯಾ ವಿರುದ್ಧದ ಟಿ-20 ಪಂದ್ಯ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ದಾಖಲೆಯನ್ನು ನಿರ್ಮಿಸಲಾಗಿದೆ.
ಅತಿಥೇಯ ನೇಪಾಳ ಹಾಗೂ ಪ್ರವಾಸಿ ನಮೀಬಿಯಾ ನಡುವೆ ನಡೆದ ಟಿ-20 ಪಂದ್ಯ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಟಿ-20 ಕ್ರಿಕೆಟ್ನಲ್ಲಿ ಅತಿ ವೇಗದ ಶತಕ ದಾಖಲಾದ ಪಂದ್ಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ ತಂಡವು ಆರಂಭಿಕ ಮಲನ್ ಕ್ರೂಗರ್ (59 ರನ್, 48 ಎಸೆತ, 6 ಬೌಂಡರಿ, 2 ಸಿಕ್ಸರ್) ಅರ್ಧಶತಕದ ಫಲವಾಗಿ ಉತ್ತಮ ಆರಂಭ ಪಡೆದುಕೊಂಡಿತ್ತು. ಆದರೆ, ತಂಡದ ಮೊತ್ತ 62 ಆಗುವಷ್ಟರಲ್ಲೇ ನಮೀಬಿಯಾ ಪ್ರಮುಖ 3 ವಿಕೆಟ್ ಕಳೆದುಕೊಂಡಿತ್ತು.
5ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ಜಾನ್ ನಿಕೋಲ್ ಲಾಫ್ಟಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು. 11ನೇ ಓವರ್ನಲ್ಲಿ ಬ್ಯಾಟಿಂಗ್ಗೆ ಇಳಿದ ಲಾಫ್ಟಿ 33 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಬೃಹತ್ ಮೊತ್ತ ಪೇರಿಸುವಲ್ಲಿ ತಂಡಕ್ಕೆ ಆಸರೆಯಾದರು. ಅಂತಿಮವಾಗಿ 36 ಎಸೆತಗಳನ್ನು ಎದುರಿಸಿದ ನಿಕೋಲ್ ಲಾಫ್ಟಿ 8 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 101 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಈ ಮೂಲಕ ಲಾಫ್ಟಿ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ ಅತಿ ವೇಗದ ಶತಕ ಬಾರಿಸಿದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಜಾನ್ ನಿಕೋಲ್ ಲಾಫ್ಟಿ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ನೇಪಾಳದ ಬ್ಯಾಟ್ಸ್ಮನ್ ಕುಶಾಲ ಮಲ್ಲ ಹೆಸರಿನಲ್ಲಿತ್ತು. ಏಷ್ಯನ್ ಗೇಮ್ಸ್ ಪಂದ್ಯದಲ್ಲಿ ಮಂಗೋಲಿಯಾ ವಿರುದ್ಧ ಕುಶಾಲ್ ಕೇವಲ 34 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.