

ಜೈಪುರ: ಕರೊನಾ ಸೋಂಕಿನ ನಿಯಂತ್ರಣಕ್ಕೆಂದು ಅನೇಕ ರಾಜ್ಯಗಳು ಲಾಕ್ಡೌನ್ ಜಾರಿಗೊಳಿಸಿವೆ. ಜನರು ಅನಾವಶ್ಯಕವಾಗಿ ಮನೆಯಿಂದ ಹೊರ ಬಾರದಂತೆ ಎಚ್ಚರಿಸಲಾಗಿದೆ. ಆದರೆ ಕೆಲವರು ಲಾಕ್ಡೌನ್ ನಿಯಮಗಳನ್ನು ಗಾಳಿಗೆ ತೂರಿ, ಹೊರಗಡೆ ಸುತ್ತಾಡುತ್ತಿದ್ದು, ಅಂತವರಿಗೆ ಪೊಲೀಸರು ವಿಧ ವಿಧವಾಗಿ ಶಿಕ್ಷೆ ನೀಡಲಾರಂಭಿಸಿದ್ದಾರೆ.
ರಾಜಸ್ಥಾನದಲ್ಲಿ ಸದ್ಯ ಲಾಕ್ಡೌನ್ ಜಾರಿಯಲ್ಲಿದೆ. ಆದರೆ ಅದನ್ನು ಲೆಕ್ಕಿಸದ ಕೆಲ ಯುವಕರು ರಸ್ತೆಗಿಳಿಯುತ್ತಿದ್ದಾರೆ. ಅದೇ ರೀತಿ ಜಲಾವರ ಜಿಲ್ಲೆಯಲ್ಲೂ ಇಬ್ಬರು ಯುವಕರು ರಾತ್ರಿ ಹೊತ್ತು ಜಾಲಿ ರೈಡ್ಗೆಂದು ಮನೆಯಿಂದ ಹೊರಬಂದಿದ್ದಾರೆ. ಅವರನ್ನು ತಡೆದ ಪೊಲೀಸರು ನಾಗಿಣಿ ಡಾನ್ಸ್ ಮಾಡುವ ಶಿಕ್ಷೆ ನೀಡಿದ್ದಾರೆ. ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲೂ ಹರಿಬಿಡಲಾಗಿದೆ. ಸಮಾಜದೆದುರು ತಪ್ಪು ಮಾಡಿ, ನಾಚಿಕೆ ಅನುಭವಿಸಿದ ಯುವಕರು, ಲಾಕ್ಡೌನ್ ಮುಗಿಯುವವರೆಗೂ ಮನೆಯಿಂದ ಹೊರಬರುವುದಿಲ್ಲ ಎನ್ನುತ್ತಾ ಮನೆಗೆ ತೆರಳಿದ್ದಾರೆ.
ರಾಜಸ್ಥಾನ ಮಾತ್ರವಲ್ಲ ಕರ್ನಾಟಕ ಪೊಲೀಸರೂ ಇದೇ ರೀತಿ ವಿಶೇಷ ಶಿಕ್ಷೆಯನ್ನು ಲಾಕ್ಡೌನ್ ನಿಯಮ ಪಾಲಿಸದವರಿಗೆ ವಿಧಿಸಿದ್ದಾರೆ. ಬಸ್ಕಿ ಹೊಡೆಯುವ ಶಿಕ್ಷೆ, ಕಸ ಗುಡಿಸುವ ಶಿಕ್ಷೆ, ಅವರ ಕೆನ್ನೆಗೆ ಅವರೇ ಹೊಡೆದುಕೊಳ್ಳುವ ಶಿಕ್ಷೆ ಹೀಗೆ ಅನೇಕ ರೀತಿಯ ಪ್ರಯತ್ನಗಳು ನಮ್ಮಲ್ಲೂ ನಡೆದಿವೆ. (ಏಜೆನ್ಸೀಸ್)