

ಚಂಡೀಗಢ: ದೇಶಾದ್ಯಂತ ಕರೊನಾ ಅಬ್ಬರ ಹೆಚ್ಚಾಗಿದೆ. ಪ್ರತಿದಿನ ಸಾವಿರಾರು ಜನರು ಸೋಂಕಿಗೆ ಬಲಿಯಾಗುತ್ತಿದ್ದು, ಅಂತ್ಯಕ್ರಿಯೆ ನಡೆಸುವುದೂ ದೊಡ್ಡ ಸಾಹಸವಾಗಿಬಿಟ್ಟಿದೆ. ಸರ್ಕಾರದಿಂದ ಯಾವುದೇ ಸವಲತ್ತು ಸಿಗದ ತಂದೆಯೊಬ್ಬ ಕರೊನಾದಿಂದಾಗಿ ಸಾವನ್ನಪ್ಪಿದ ತನ್ನ ಮಗಳನ್ನು ಹೆಗಲ ಮೇಲೇ ಹೊತ್ತೊಯ್ದು ಅಂತ್ಯಸಂಸ್ಕಾರ ಮಾಡಿರುವ ಘಟನೆ ಪಂಜಾಬ್ನ ಜಲಂಧರ್ನಲ್ಲಿ ನಡೆದಿದೆ.
ಜಲಂಧರ್ನ ರಾಮನಗರ ವಾಸಿ ದಿಲೀಪ್ ಕುಮಾರ್ ಅವರ ಮಗಳು ಸೋನು (11) ಕರೊನಾ ಸೋಂಕಿಗೆ ಬಲಿಯಾಗಿದ್ದಾಳೆ. ಸೋಂದು ದೃಢವಾದ ಹಿನ್ನೆಲೆಯಲ್ಲಿ ಆಕೆಯನ್ನು ಜಲಂಧರ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಸ್ಥಿತಿ ಗಂಭೀರವಾಗಿದ್ದು, ಅಮೃತಸರಕ್ಕೆ ಕರೆದೊಯ್ಯುವಂತೆ ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದು, ಆಕೆಯನ್ನು ಡಿಸ್ಚಾರ್ಜ್ ಮಾಡಿದ್ದಾರೆ. ಆಕೆಯನ್ನು ಕರೆದೊಯ್ಯಲು ಯಾವುದೇ ವಾಹನ ವ್ಯವಸ್ಥೆಯನ್ನೂ ಮಾಡಿಲ್ಲ. ಈ ಮಧ್ಯೆ ಸೋನು ಕೊನೆಯುಸಿರೆಳೆದಿದ್ದಾಳೆ.
ಸೋನುವಿನ ಶವವನ್ನು ಸಾಗಿಸಲೂ ಆ್ಯಂಬುಲೆನ್ಸ್ ಲಭ್ಯವಾಗಿಲ್ಲ. ಆ ಕಾರಣ ಆಕೆಯ ತಂದೆ ಮಗಳ ದೇಹವನ್ನು ಹೆಗಲ ಮೇಲೆಯೇ ಹೊತ್ತು ತಂದು ಅಂತ್ಯಸಂಸ್ಕಾರ ಮಾಡಿದ್ದಾನೆ. ನಿಯಮಗಳ ಪ್ರಕಾರ ಸರ್ಕಾರದ ವತಿಯಿಂದ ಅಂತ್ಯಸಂಸ್ಕಾರ ಮಾಡಬೇಕು. ಆದರೆ ಎಷ್ಟು ಸಮಯವಾದರೂ ಯಾರೊಬ್ಬರೂ ಮುತುವರ್ಜಿ ವಹಿಸಿದ ಹಿನ್ನೆಲೆಯಲ್ಲಿ ತಾನೇ ಅಂತ್ಯ ಸಂಸ್ಕಾರ ಮಾಡಿದ್ದಾಗಿ ದಿಲೀಪ್ ಕುಮಾರ್ ತಿಳಿಸಿದ್ದಾರೆ.
ಜಲಂಧರ್ ಜಿಲ್ಲೆಯಲ್ಲಿ ಸುಮಾರು 500ಕ್ಕೂ ಅಧಿಕ ಆಸ್ಪತ್ರೆಗಳಿವೆ. 100ಕ್ಕೂ ಅಧಿಕ ಆ್ಯಂಬುಲೆನ್ಸ್ಗಳಿವೆ. ಅಷ್ಟಿದ್ದರೂ ಬಡ ಸೋಂಕಿತರಿಗೆ ಸರಿಯಾದ ಸೌಲಭ್ಯ ಸಿಗುತ್ತಿಲ್ಲ ಎನ್ನುವ ದೂರುಗಳು ಕೇಳಿಬರುತ್ತಿವೆ. (ಏಜೆನ್ಸೀಸ್)